ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ ಅನನ್ಯ ಬರಹಗಾರ. ಅವರು ಬರೆದಂತೆ ಬದುಕಿದ ಲೇಖಕ’ ಎಂದು ಪುತ್ತೂರು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಇಲ್ಲಿನ ಸುರಭಿ ಸಾಂಸ್ಕೃತಿಕ, ಸಾಹಿತ್ಯ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ರೋಟರಿ ಸಮುದಾಯ ಭವನದಲ್ಲಿ ನಡೆದ ಪೂರ್ಣಚಂದ್ರ ತೇಜಸ್ವಿ-ಮಂಥನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಸರದಿಂದ ಪಡೆದ ಅನುಭೂತಿಯೇ ತೇಜಸ್ವಿ ಅವರ ಬರಹಗಳ ಕೇಂದ್ರ ವಸ್ತು. ಕುವೆಂಪು ಅವರಿಗೆ ಪರಿಸರ ಅಧ್ಯಾತ್ಮದ ದಾರಿಯಾದರೆ, ಕಾರಂತರಿಗೆ ಪರಿಸರ ವಿಜ್ಞಾನದ ಮಾರ್ಗ. ಆದರೆ, ತೇಜಸ್ವಿ ಅವರಿಗೆ ಅದು ಬೆರಗುಗೊಳಿಸುವ ವಿಸ್ಮಯ‘ ಎಂದು ವಿವರಿಸಿದರು.
ನಾವು ಹವ್ಯಾಸ ಎಂದು ಭಾವಿಸುವ ಛಾಯಾಗ್ರಹಣ, ಭೇಟೆ ಮತ್ತು ಮೀನು ಹಿಡಿಯುವಿಕೆ, ತೇಜಸ್ವಿಗೆ ನಿಸರ್ಗದ ಚೋದ್ಯಗಳ ಅಧ್ಯಯನದ ಮಾರ್ಗ. ಅವರು ತಮ್ಮ ಕಥನಗಳಲ್ಲಿ ಪರಿಸರಾವಲಂಬಿ ಮಾನವ, ಆಧುನಿಕತೆಯ ಪ್ರವಾಹದಲ್ಲಿ ಅವನತಿಯತ್ತ ಸಾಗುವ ಚಿತ್ರಗಳನ್ನು ನೀಡಿದ್ದಾರೆ‘ ಎಂದು ದೇರ್ಲ ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ವಿಮರ್ಶಕಿ ಡಾ. ಸೌಮ್ಯಾ ಹೆರಿಕುದ್ರು, ‘ಸಾಂಸ್ಕೃತಿಕ, ಬೌದ್ಧಿಕ, ರಾಜಕೀಯ ಬಿಕ್ಕಟ್ಟಿನ ಮತ್ತು ಈ ಕುರಿತಾದ ಸಂವಾದಗಳು ಅಸಾಧ್ಯವಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಓದುಗರೊಂದಿಗೆ ಸಂವಾದ ನಡೆಸುವ ತೇಜಸ್ವಿ ಕೃತಿಗಳನ್ನು ಓದಬೇಕು‘ ಎಂದರು.
ರಾಘವೇಂದ್ರ ಕಾಲ್ತೋಡು ಸಮನ್ವಯಕಾರರಾಗಿದ್ದರು. ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ತೇಜಸ್ವಿಯವರ ಕೃತಿಗಳಲ್ಲಿ ಪರಿಸರ ಮತ್ತು ಬದುಕು’ ವಿಷಯದ ಆನ್‌ಲೈನ್ ಸ್ಪರ್ಧೆಯಲ್ಲಿ ವಿಜೇತರಾದ ಸಾಗರದ ಪೂಜಾ ಎಂ, ಬಾದಾಮಿಯ ಭೀಮವ್ವ ಹಿರೇಮನಿ ಮತ್ತು ಉಜಿರೆಯ ರಕ್ಷಾ ಅವರಿಗೆ ನಗದು ಬಹುಮಾನ, ಉಡುಗೊರೆ ವಿತರಿಸಲಾಯಿತು.
ಭ್ರಮರಾ ಉಡುಪ ಪ್ರಾರ್ಥಿಸಿದರು. ವಲಯ ಶಿಕ್ಷಣ ಸಂಯೋಜಕ ಅಬ್ದುಲ್ ರವೂಫ್ ಸ್ವಾಗತಿಸಿದರು. ಯೋಗಿಶ್ ಬಂಕೆಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭಾಸ್ಕರ ಬಾಡ ವಂದಿಸಿದರು. ಕೀರ್ತಿ ಭಟ್ ಉಪ್ಪುಂದ ನಿರೂಪಿಸಿದರು. ಎಚ್. ವಸಂತ ಹೆಗ್ಡೆ, ಸುರಭಿ ನಿರ್ದೇಶಕ ಸುದಾಕರ ಬೈಂದೂರು ಮತ್ತಿತರರು ಇದ್ದರು.