ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯಾದ್ಯಂತ ಸ್ವರ್ಣವಲ್ಲಿ ಸಂಸ್ಥಾನದಿಂದ ಏರ್ಪಡಿಸಿರುವ ಭಗವದ್ಗೀತಾ ಅಭಿಯಾನದ ದಶಮಾನೋತ್ಸವ ಕಾರ್ಯಕ್ರಮ ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯಿತು.
ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರು ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿ, ಜೀವನದಲ್ಲಿ ಯಶಸ್ಸು-ಶ್ರೇಯಸ್ಸು ಸಾಧಿಸಲು ಶಿಸ್ತು ಮತ್ತು ಧ್ಯೇಯ ಪೂರ್ಣ ಸಾಧನೆ ಅಗತ್ಯ. ಭಗವದ್ಗೀತಾ ಪಠಣ ನಿತ್ಯ ಮಾಡುವುದರಿಂದ ಅಂತ:ಕರಣ ಶುದ್ಧಿಯಾಗುತ್ತದೆ. ಅರ್ಥಕ್ಕಿಂತ ಶ್ರದ್ಧೆ ಪರಿಣಾಮಕಾರಿಯಾದುದು ಎಂದು ಗೀತಾ ಸಂದೇಶವನ್ನು ಮನೆಮನೆಗೆ ತಲುಪಿಸುವಲ್ಲಿ ರಾಮಕ್ಷತ್ರಿಯ ಸಮಾಜದ ಮಾತೃಮಂಡಳಿಯವರು ಸ್ಥಳೀಯ ವಿದ್ಯಾಸಂಸ್ಥೆಗಳು ತೊಡಗಿಸಿಕೊಂಡಿದ್ದರಿಂದ ಪಠಣ, ಮಾರ್ಗದರ್ಶನ ಮತ್ತು ಸ್ಪರ್ಧೆ ನಿರ್ವಹಣೆ ಯಶಸ್ವಿಯಾಗಿದೆ ಎಂದರು.
ಸ್ವರ್ಣವಲ್ಲಿ ಸಂಸ್ಥಾನದ ಟ್ರಸ್ಟೀ, ಅಭಿಯಾನದ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೂಜ್ಯ ಶ್ರೀಗಳ ಸಾಮಾಜಿಕ ಕಾಳಜಿ ತಪೋನುಷ್ಠಾನಗಳು ಸಮಾಜದ ಏಳ್ಗೆಗೆ ಪೂರಕವಾಗಿವೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಸ್ಪರ್ಧಾ ವಿವರಗಳನ್ನು ವಿವರಿಸಿ ಆನ್‌ಲೈನ್ ನಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಅಧ್ಯಾಪಕರನ್ನು ಅಭಿನಂದಿಸಿ ಪ್ರತಿ ಶಿಕ್ಷಣ ಸಂಸ್ಥೆಗೆ ಉಚಿತ ಪುಸ್ತಕ ವಿತರಿಸಿದರು.
ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಪರಮೇಶ್ವರ ಹೋಬಳಿದಾರ, ಕಾರ್ಯದರ್ಶಿ ಜಿ. ಹುನುಮಂತ, ಮಾತ್ರ ಮಂಡಳಿ ಅಧ್ಯಕ್ಷೆ s ವನಜಾ ಭಾಸ್ಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಲಿತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಮಾತೃಮಂಡಳಿ ಸದಸ್ಯರಿಂದ ಪ್ರಾರ್ಥನೆ ನಡೆಯಿತು. ಕೇಶವ ನಾಯಕ್ ಸ್ವಾಗತಿಸಿದರು, ಯು ಗಣೇಶ ಪ್ರಸನ್ನ ಮಯ್ಯ ವಂದಿಸಿದರು.

