Kundapra.com ಕುಂದಾಪ್ರ ಡಾಟ್ ಕಾಂ

ಸಾಸ್ತಾನದಲ್ಲಿ ಪರಂಪರೆ ಶಿಕ್ಷಣ ಮಾಹಿತಿ ಶಿಬಿರ

ಕೋಟ: ವಂಶ ಪಾರಂಪರ್ಯದಿಂದ ಬಂದ ಕುಲಕಸುಬು, ಕೃಷಿ, ಆಹಾರ ಪದ್ದತಿ, ಹಬ್ಬ, ಉತ್ಸವ ನಂಬಿಕೆಗಳು, ಸರ್ವ ಧರ್ಮೀಯ ಭಾವನೆಗಳು ಜನ ಸಮುದಾಯದಲ್ಲಿ ಜೀವಂತವಾಗಿದ್ದವು, ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ನಮ್ಮ ವಿದ್ಯಾರ್ಥಿಗಳು ಅಂಕಗಳಿಸುವ ಯಂತ್ರಗಳಾಗಿ ಉದ್ಯೋಗಕ್ಕಾಗಿ ಶಿಕ್ಷಣ ಗಳಿಸುವಂತಾಗಿ ಗತವೈಭವ ಅವರಿಂದ ದೂರವಾಗಿದೆ ಎಂದು ಕುಂದಾಪುರದ ಉದ್ಯಮಿ ಕೆ.ಆರ್ ನಾಯಕ್ ವಿಷಾದ ವ್ಯಕ್ತಪಡಿಸಿದರು.

ಸಾಸ್ತಾನದ ಶಿವಕೃಪ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾರಾಡಿಯ ಡಾ.ಎ.ವಿ.ಬಾಳಿಗಾ ಕಾಲೇಜು ಮತ್ತು ಕೋಟ ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಬಾರ್ಕೂರು ಸ್ನಾತ ಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಒಂದು ದಿನದ ಪರಂಪರೆ (ಸಾಂಸ್ಕೃತಿಕ) ಶಿಕ್ಷಣ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಉಪನ್ಯಾಸಕ ಗುಂಡ್ಮಿ ಶಂಕರನಾರಾಯಣ ಅಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಶ್ಚಾತ್ಯ ಜೀವನ ಶೈಲಿಯಿಂದ ನಮ್ಮ ಯುವ ಜನತೆ ದಾರಿ ತಪ್ಪುವ ಅಪಾಯಗಳು ಹೆಚ್ಚುತ್ತಿವೆ. ಮಕ್ಕಳ ಬೌದ್ಧಿಕ ಬೆಳವಣಿಗೆಯೊಂದಿಗೆ ಮಾನಸಿಕ, ದೈಹಿಕ, ಭಾವನಾತ್ಮಕ ಬೆಳವಣಿಗೆ ಮತ್ತು ನಿರಂತರ ಅಧ್ಯಯನ ಹಾಗೂ ಸಾಂಸ್ಕೃತಿಕ ಪರಂಪರೆಯೊಂದಿಗೆ ಬೆಸುಗೆ ಹಾಕುವಂತಹ ವಿಧಾನ ಅಗತ್ಯ ಎಂದು ಹೇಳಿದರು.

ಕೋಟ ಪಡುಕೆರೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ್, ಹಾರಾಡಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ವಿದ್ಯಾಶ್ರೀ, ಬಾರ್ಕೂರು ಕಾಲೇಜಿನ ಉಪ ಪ್ರಾಂಶುಪಾಲ ಡಾ.ರಮೇಶ್ ಆಚಾರ್ಯ, ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ, ಎಂ.ಕೆ. ಕೃಷ್ಣಯ್ಯ ಇದ್ದರು. ರಮೇಶ್ ವಕ್ವಾಡಿ ಸ್ವಾಗತಿಸಿದರು. ಶಕೀಲಾ ಡಿ.ರಾವ್ ವಂದಿಸಿದರು. ಮಾಲತಿ ನಿರೂಪಿಸಿದರು.

Exit mobile version