Kundapra.com ಕುಂದಾಪ್ರ ಡಾಟ್ ಕಾಂ

ಪದ್ಮಾಸನ ಭಂಗಿಯಲ್ಲಿ ಈಜಿ ದಾಖಲೆ ನಿರ್ಮಿಸಿದ ಶಿಕ್ಷಕ ನಾಗರಾಜ ಖಾರ್ವಿ ಕಂಚುಗೋಡು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಲಿಗೆ ಸರಪಳಿ ಕಟ್ಟಿಕೊಂಡು ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಯಶಸ್ವಿಯಾಗಿ ಒಂದು ಕಿ.ಮೀ. ಈಜಿರುವ ಗುಜ್ಜಾಡಿ ಗ್ರಾಮದ ಕಂಚುಗೋಡಿನ ಶಿಕ್ಷಕ ನಾಗರಾಜ ಖಾರ್ವಿ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ.

ಮಂಗಳೂರಿನ ತಣ್ಣೀರುಬಾವಿ ಬೀಚ್‌ನಲ್ಲಿ ಶುಕ್ರವಾರ ಬೆಳಿಗ್ಗೆ 25 ನಿಮಿಷ 16 ಸೆಕೆಂಡ್ 63 ಫ್ರಾಕ್ಷನ್‌ನಲ್ಲಿ ಒಂದು ಕಿ.ಮೀ ಈಜುವ ಮೂಲಕ ಅವರು ಗುರಿ ತಲುಪಿದರು. ಬೆಳಿಗ್ಗೆ8.55ಕ್ಕೆ ತಣ್ಣೀರುಬಾವಿಯ ದಡದಿಂದ ಈಜು ಆರಂಭಿಸಿದ ನಾಗರಾಜ ಖಾರ್ವಿ, 9.20ಕ್ಕೆ ಮರಳಿ ದಡಸೇರಿದರು.

ಸಾಧನೆಗಾಗಿ ತಣ್ಣೀರುಬಾವಿ ಬೀಚ್ ಅನ್ನು ಆಯ್ದುಕೊಂಡ ನಾಗರಾಜ ಖಾರ್ವಿ ಸಮುದ್ರದಲ್ಲಿ ಬೆಳಗಿನ ಗಾಳಿ ಉತ್ತರದ ಕಡೆಗಿದ್ದರೂ, ತಮ್ಮ ಸಂಪೂರ್ಣ ಶಕ್ತಿ ಬಳಸಿ ದಕ್ಷಿಣದ ಕಡೆಗೆ ನೆಟ್ಟಿದ್ದ ಧ್ವಜವನ್ನು ತಲುಪಿ ಗುರಿ ಮುಟ್ಟಿದರು ಎಂದು ತರಬೇತುದಾರ ಬಿ.ಕೃಷ್ಣ ನಾಯ್ಕ್ ಹೇಳಿದರು.

‘ಧರ್ಮಸ್ಥಳದ ಶಾಂತಿವನದಲ್ಲಿ ಯೋಗ ಕಲಿತು, ಪದ್ಮಾಸನ ಹಾಕಿ ನೀರಿನಲ್ಲಿ ಈಜುತ್ತಾ ಅಭ್ಯಾಸ ಮಾಡಿದೆ. ಸತತ ಅಭ್ಯಾಸ ಮಾಡಿ, ನೀರಿನ ಮೇಲೆ ತೇಲಲು ಕಲಿತೆ. ಇದೀಗ ಸಮುದ್ರದಲ್ಲಿ ಈಜಿ ಗುರಿ ಮುಟ್ಟಿರುವುದು ಸಂತಸ ತಂದಿದೆ’ ಎಂದು ನಾಗರಾಜ ಖಾರ್ವಿ ಹೇಳಿದ್ದಾರೆ.

ಬಂಟ್ವಾಳದ ಕಲ್ಮಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ನಾಗರಾಜ ಖಾರ್ವಿ ಅವರು ಉತ್ತಮ ಕ್ರೀಡಾ ಪಟು ಹಾಗೂ ಈಜುಗಾರರೂ ಹೌದು. ಕವಿಹೃದಯಿಯೂ ಆಗಿರುವ ಅವರು ಕೆಲ ಸಮಯದ ಹಿಂದೆ ಕವನ ಸಂಕಲನವೊಂದನ್ನು ಹೊರತಂದಿದ್ದರು.

Exit mobile version