ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ನಾಗೂರಿನ ಕೆಎಎಸ್ ಆಡಿಟೋರಿಯಮ್‌ನಲ್ಲಿ ಕನ್ನಡ ಜಾನಪದ ಪರಿಷತ್ತಿನ ಬೈಂದೂರು ತಾಲ್ಲೂಕು ಘಟಕದ ಉದ್ಘಾಟನೆ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ, ಜಾನಪದ ಮೂಲೆಗುಂಪಾದರೆ ಮಾನವ ಜನಾಂಗ ಮೂಲೆಗುಂಪಾಗುತ್ತದೆ. ಕನ್ನಡ ಜಾನಪದ ಪರಿಷತ್ತು ಕರ್ನಾಟಕದ ಸಮೃದ್ಧ ಜಾನಪದದ ಕುರಿತು ಕ್ಷೇತ್ರಕಾರ್ಯ ಮತ್ತು ದಾಖಲೀಕರಣ ನಡೆಸಿ ಅದನ್ನು ರಕ್ಷಿಸುವ ಗುರಿ ಹೊಂದಿದೆ ರಾಜ್ಯ ಸರ್ಕಾರದ ಎಲ್ಲ ಅಕಾಡೆಮಿಗಳು ಬೆಂಗಳೂರಿಗೆ ಸೀಮಿತವಾಗುತ್ತಿವೆ. ಸರ್ಕಾರ ಜಾನಪದ ಪ್ರಾಧಿಕಾರ ಸ್ಥಾಪಿಸಿ, ನಾಲ್ಕು ಪ್ರಾದೇಶಿಕ ವಿಭಾಗಗಳಾಗಿ ಮಾಡಿ ಅಲ್ಲಿಗೆ ಜಾನಪದದ ಉದ್ದೇಶಕ್ಕೆ ದುಡಿಯುವವರನ್ನು ನೇಮಕ ಮಾಡಬೇಕು ಎಂಬ ಬೇಡಿಕೆ ಇಡಲಾಗಿದೆ ಎಂದು ಹೇಳಿದರು.
ಈ ವರೆಗೆ ಐದು ಜಾನಪದ ಮಹಾಕಾವ್ಯಗಳನ್ನು ಗುರುತಿಸಲಾಗಿದೆ. ಇನ್ನು ಹಲವು ಖಂಡಕಾವ್ಯಗಳಿವೆ. ಎಲ್ಲವುಗಳ ಅಧ್ಯಯನ ಮತ್ತು ದಾಖಲಾತಿ ಆಗಬೇಕು. ಅಜ್ಞಾತರಾಗಿರುವ ಜಾನಪದ ಕಲಾವಿದರನ್ನು ಬೆಳಕಿಗೆ ತರಬೇಕು. ಅದಕ್ಕಾಗಿ ಪರಿಷತ್ತಿನ ತಾಲ್ಲೂಕು, ಹೋಬಳಿ ಘಟಕಗಳನ್ನು ರಚಿಸಲಾಗುತ್ತಿದೆ. ಮುಂದೆ ಗ್ರಾಮ ಘಟಕಗಳನ್ನೂ ಸ್ಥಾಪಿಸಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗ ಮುಖ್ಯಸ್ಥ ಡಾ. ಚೆಲುವರಾಜು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆರೋಗ್ಯಕರ ಮನಸ್ಸಿನ ವ್ಯಕ್ತಿಗಳು ಬೇಕು. ಜಾನಪದಕ್ಕೆ ಅಂತಹ ವ್ಯಕ್ತಿಗಳನ್ನು ನಿರ್ಮಿಸುವ ಶಕ್ತಿ ಇದೆ ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ನಳಿನ್‌ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಗಂಗೊಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ತಿನ ವಿಭಾಗೀಯ ಸಂಚಾಲಕಿ ಡಾ. ಭಾರತಿ ಮರವಂತೆ ಶುಭ ಹಾರೈಸಿದರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ರಾಮನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಕೆ. ಸಿ. ಇದ್ದರು. ವಿನಯಾ ಖಂಬದಕೋಣೆ ನಿರೂಪಿಸಿದರು.
