Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ: ಶೇ 17 ಡಿವಿಡೆಂಡ್ ಘೋಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಟೌನ್ ಸೌಹಾರ್ದ ಸಹಕಾರಿಯ 100ನೇ ಸಾಮಾನ್ಯ ಸಭೆಯು ಇಲ್ಲಿನ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಜರುಗಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷ ಎಚ್. ಗಣೇಶ್ ಕಾಮತ್, ಆರ್ಥಿಕ ಹಿಂಜರಿತ ಹಾಗೂ ಕೋವಿಡ್-19 ಪರಿಣಾಮದ ಹೊರತಾಗಿಯೂ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು 2019-209ನೇ ಸಾಲಿನಲ್ಲಿ 74.62 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಶತಮಾನೋತ್ಸವ ವರ್ಷದಲ್ಲಿ ಸದಸ್ಯರಿಗೆ ಶೇ. 17 ಪಾಲು ಮುನಾಫೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಸಹಕಾರಿಯು ಪ್ರಸಕ್ತ ಸಾಲಿನಲ್ಲಿ 113.71 ಕೋಟಿ ವಹಿವಾಟು ದಾಖಲಿಸಿದ್ದು, ದುಡಿಯುವ ಬಂಡವಾಳ 53.70 ಕೋಟಿ ರೂ ಮತ್ತು 44.49 ಕೋಟಿ ರೂ. ಠೇವಣಿ ಹೊಂದಿದೆ. ವಿವಿಧ ಸಹಕಾರಿ ಬ್ಯಾಂಕ್‌ಗಳಲ್ಲಿ 19.53 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು.

ತಂತ್ರಜ್ಞಾನಕ್ಕೆ ಹೊಂದಿಕೊಂಡು ಸಹಕಾರಿಯ ಎಲ್ಲಾ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸದಸ್ಯರಿಗಾಗಿ ಸ್ವಸಹಾಯ ಗುಂಪುಗಳ ರಚನೆ ಮತ್ತು ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡುವುದು. ಸ್ವಸಹಾಯ ಗುಂಪುಗಳಿಗೆ ಅಗತ್ಯ ಸಾಲ ಸೌಲಭ್ಯಗಳನ್ನು ಕನಿಷ್ಠ ಬಡ್ಡಿ ದರದಲ್ಲಿ ಒದಗಿಸಲು ಚಿಂತನೆ ನಡೆಸಲಾಗಿದೆ. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರುಗಳಿಸಿದ್ದು, ಸಹಕಾರಿಯ ಸದಸ್ಯರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸವೇ ಸಹಕಾರಿಯ ಅಭಿವೃದ್ಧಿಗೆ ಕಾರಣ ಎಂದು ಹೇಳಿದರು.

ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಜಿ. ವೆಂಕಟೇಶ ನಾಯಕ್, ಜಿ. ವೆಂಕಟೇಶ ಶೆಣೈ, ಬಿ.ರಾಘವೇಂದ್ರ ಪೈ, ಉದಯಶಂಕರ ರಾವ್, ಮಹಾಬಲ ಪೂಜಾರಿ, ನಾರಾಯಣ ಪ್ರಜಾರಿ, ಆನಂದ ಜಿ., ವತ್ಸಲಾ ಎಸ್.ಕಾಮತ್ ಮತ್ತು ಮಾಲಾ ಕೆ.ನಾಯಕ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version