ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವುಂದ ಅರೆಹೊಳೆಯಲ್ಲಿ ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಊರ ನಾಗರಿಕರು ಶುಕ್ರವಾರ ಆಯೋಜಿಸಿದ್ದ ಆರ್. ಎನ್. ಶೆಟ್ಟಿ ಶ್ರದ್ಧಾಂಜಲಿ ಸಭೆ ಜರುಗಿತು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ ಚಂದ್ರ ಶೆಟ್ಟಿ, ಮಾತನಾಡಿ, ಉದ್ಯಮಿ, ಸಮಾಜ ಸೇವಕ ಹಾಗೂ ಕೊಡುಗೈ ದಾನಿ ಆರ್. ಎನ್. ಶೆಟ್ಟಿ ಅವರು ಬೆಳೆದು ಬಂದ ಹಾದಿ ಅನನ್ಯವಾದುದು. ಅವರು ಯುವ ಪೀಳಿಗೆಗೆ ಅನುಕರಣೀಯ ಮಾದರಿ ಆಗಿರುವುದರಿಂದ ಅವರ ಬದುಕನ್ನು ದಾಖಲಿಸಿ, ಯುವ ಸಮುದಾಯ ಅರಿತುಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ, ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಆರ್ ಎನ್ ಶೆಟ್ಟಿ ಉದ್ಯಮದಲ್ಲಿ ಯಶಸ್ಸು ಸಾಧಿಸುವುದರ ಜತೆಗೆ ದುಡಿಮೆಯ ಗಣನೀಯ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದರು. ದೇವಾಲಯ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದರು. ಅನೇಕ
ಸಾರ್ವಜನಿಕ ಸಂಸ್ಥೆಗಳಿಗೆ ಉದಾರ ನೆರವು ನೀಡಿದರು. ರಾಜ್ಯದಾದ್ಯಂತ ಅವರು ನಿರ್ಮಿಸಿರುವ ಮಹತ್ವದ ಸಾರ್ವಜನಿಕ ಕಾಮಗಾರಿಗಳ ಜತೆಗೆ ಅವರು ಕಟ್ಟಿ ಬೆಳೆಸಿದ ಶಿಕ್ಷಣ, ಆರೋಗ್ಯ, ಉದ್ಯಮ, ಸೇವಾ ಸಂಸ್ಥೆಗಳು ಇವೆ. ಅವರಿಗೆ ಬೇರೆ ಸ್ಮಾರಕ ಬೇಕಿಲ್ಲ ಎಂದರು.
ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಡಾ. ಎ. ಗಣೇಶ ಮಧ್ಯಸ್ಥ, ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದ ಮುಖ್ಯಸ್ಥೆ ಡಾ. ವಾಹಿನಿ, ಆರ್. ಎನ್. ಶೆಟ್ಟಿ ಅವರ ಬದುಕು ಹಾಗೂ ಸಾಧನೆಗಳನ್ನು ಸ್ಮರಿಸಿದರು.
ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ವಕ್ವಾಡಿ ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ವಕ್ವಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ ನಿರೂಪಿಸಿ, ವಂದಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಮಹಾದೇವ ಮಂಜ, ಆರ್ ಎನ್ ಶೆಟ್ಟಿ ನಿರ್ಮಾಣ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಉದಯ್ ಎನ್ ಶೆಟ್ಟಿ, ಬಂಧುಗಳು, ಅಭಿಮಾನಿಗಳು ಇದ್ದರು.