Kundapra.com ಕುಂದಾಪ್ರ ಡಾಟ್ ಕಾಂ

ದೊಂಬೆ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಗಮನ ಸೆಳೆದ ಮಕ್ಕಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅನುದೀಪ್ ಹೆಗ್ಡೆ-ವಿನುಷ್ಕಾ ದಂಪತಿ ಸಮೀಪದ ಸೋಮೇಶ್ವರ ಕಡಲತೀರವನ್ನು ಸ್ಥಳೀಯರ ಜತೆಸೇರಿ ತ್ಯಾಜ್ಯಮುಕ್ತಗೊಳಿಸಿ, ಪ್ರಧಾನಿಯ ಮನ್‌ಕೀ ಬಾತ್‌ನಲ್ಲಿ ಉಲ್ಲೇಖಗೊಂಡು ರಾಷ್ಟ್ರವ್ಯಾಪಿ ಸುದ್ದಿಯಾದ ಬೆನ್ನಲ್ಲೇ ದೊಂಬೆ ತೀರದಲ್ಲಿ ಸುತ್ತಲಿನ ೨೧ ಮಕ್ಕಳು ಸೋಮವಾರ ಅವರ ಕಾರ್ಯವನ್ನು ಅನುಕರಿಸಿ ಗಮನ ಸೆಳೆದಿದ್ದಾರೆ.

ಅಲ್ಲಿ ನೂತನ ಮನೆ ನಿರ್ಮಾಣ ಮಾಡುತ್ತಿರುವ ಪ್ರಿಯಾಂಕಾ ಎಂಬುವರು, ತೀರದಲ್ಲಿ ಸಂಗ್ರಹವಾಗಿರುವ ಕಸಕಡ್ಡಿಗಳಿಂದ ಪರಿಸರ ಕಲುಷಿತ ಆಗುತ್ತಿರುವುದನ್ನು ಕಂಡು ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸುತ್ತಮುತ್ತಲಿನ ಮಕ್ಕಳಿಗೆ ಪ್ರೇರಣೆ ನೀಡಿದರು. ಕಾಲೇಜು ವಿದ್ಯಾರ್ಥಿನಿ ಶ್ರೀದೇವಿ ತನ್ನ ಇಬ್ಬರು ಎನ್‌ಸಿಸಿ ಸ್ನೇಹಿತೆಯರೊಂದಿಗೆ ಮಕ್ಕಳನ್ನು ಸೇರಿಕೊಂಡರು. ಅನುದೀಪ್ ಹೆಗ್ಡೆ ಬಂದು ಅವರೆಲ್ಲರನ್ನು ಉತ್ತೇಜಿಸಿದರು. ಎಲ್ಲ ಸೇರಿ ಸುಮಾರು ೨೦೦ ಕೆಜಿ ಆಗುವಷ್ಟು ತ್ಯಾಜ್ಯ ಸಂಗ್ರಹಿಸಿದರು.

ಕೊನೆಯಲ್ಲಿ ಅನುದೀಪ್ ಹೆಗ್ಡೆ, ಮನೆಗಳಲ್ಲಿ, ಪರಿಸರದಲ್ಲಿ ಒಟ್ಟಾಗುವ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡುವ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ತಾವು ಹೊಸದಾಗಿ ಕಂಡುಕೊಂಡ ಈ ವಿನೂತನ ಪರಿಸರಪರ ಹವ್ಯಾಸದ ಬಗ್ಗೆ ಮಾತನಾಡಿದ ಹೆಗ್ಡೆ, ಮುಂದೆಯೂ ಬಿಡುವಿನ ವೇಳೆಯಲ್ಲಿ ಅದನ್ನು ಮುಂದುವರಿಸುವುದಾಗಿ ತಿಳಿಸಿದರು. ಮುಂದಿನ ಭಾನುವಾರ ತ್ರಾಸಿಯ ಪರಿಚಯದ ಮಿಥುನ್ ಮತ್ತು ಸ್ಥಳೀಯರೊಂದಿಗೆ, ಪ್ರವಾಸಿಗಳು ಎಸೆದ ತ್ಯಾಜ್ಯದಿಂದ ಕಲುಷಿತವಾಗಿರುವ ತ್ರಾಸಿ ತೀರದಲ್ಲಿ ಸ್ವಚ್ಛತಾ ಕಾರ್ಯ ನಡೆಸುವುದಾಗಿ ಹೇಳಿದರು. ಸೋಮೇಶ್ವರ ತೀರದಲ್ಲಿ ತಾವು, ದೊಂಬೆಯಲ್ಲಿ ಅಲ್ಲಿನ ಮಕ್ಕಳು ನಡೆಸಿದ ಅಭಿಯಾನ ಮುಂದೆ ಹಲವರಿಗೆ ಸ್ಪೂರ್ತಿ ನೀಡಬಹುದು ಎಂದು ಆಶಿಸಿದರು.

Exit mobile version