Kundapra.com ಕುಂದಾಪ್ರ ಡಾಟ್ ಕಾಂ

ಮಂದಗತಿಯಲ್ಲಿ ಜಲಸಿರಿ, ಒಳಚರಂಡಿ ಯೋಜನೆ: ಪುರಸಭೆ ವಿಶೇಷ ಸಭೆಯಲ್ಲಿ ಮಾಹಿತಿ ನೀಡಬೇಕಿದ್ದ ಅಧಿಕಾರಿ ಗೈರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಸಭೆ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ನಿರಂತರ ನೀರು ಪೂರೈಕೆ ಕಾಮಗಾರಿ ಕುರಿತು ವಿವರಣೆ ನೀಡಬೇಕಿದ್ದ ಅಧಿಕಾರಿ ಸಭೆಗೆ ಗೈರಾಗಿದ್ದು, ಅವರಿಲ್ಲದೆ ಯೋಜನೆ ಕುರಿತು ಚರ್ಚೆ ಅಸಾಧ್ಯ. ಅಧಿಕಾರಿ ಸಮಯ ಪಡೆದು ಮತ್ತೊಮ್ಮೆ ಸಭೆ ಕರೆಯಬೇಕು. ಒಳಚರಂಡಿ ಯೋಜನೆ ಕಾಮಗಾರಿ ಮುಗಿಸಲು ಎಷ್ಟು ಸಮಯ ಬೇಕು.. ಪುರಸಭೆ ವೆಟ್‌ವೆಲ್ ನಿರ್ಮಾಣಕ್ಕೆ ಜಾಗ ಕೊಟ್ಟ ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುತ್ತೇವೆ. ಇವೆಲ್ಲವೂ ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ಜಲಸಿರಿ ಹಾಗೂ ಒಳ ಚರಂಡಿ ಯೋಜನೆ ಕುರಿತು ನಡೆದ ವಿಶೇಷ ಸಭೆಯಲ್ಲಿ ಚರ್ಚಿಗೆ ಬಂದ ಪ್ರಮುಖ ಅಂಶಗಳು.

ಜಲಸಿರಿ ಯೋಜನೆ ಬಗ್ಗೆ ಸದಸ್ಯ ಮೋಹನದಾಸ್ ಶೆಣೈ ಮಾತನಾಡಿ, ಇಷ್ಟು ದೊಡ್ಡ ಯೋಜನೆ ಬಗ್ಗೆ ವಿಶೇಷ ಸಭೆ ಆಯೋಜಿಸಿ ಮುಂಚಿತ ಮಾಹಿತಿ ನೀಡಿದರೂ ಸಭೆಗೆ ಯೋಜನೆಯ ಮುಖ್ಯಾಧಿಕಾರಿ ಬಂದಿಲ್ಲ. ಬೇರೆಯವರು ಕೊಡುವ ಸಮಜಾಯಿಸಿ ನಮಗೆ ಬೇಕಿಲ್ಲ. ಸಭೆಗೆ ಮಾಹಿತಿ ನೀಡಿಯೂ ಬಾರದಿರುವುದು ಪುರಸಭೆ ಹಾಗೂ ಸದಸ್ಯರಿಗೆ ಮಾಡಿದ ಅವಮಾನ. ಅಧಿಕಾರಿ ದಿನ ಫಿಕ್ಸ್ ಮಾಡಿ ಮತ್ತೊಮ್ಮೆ ಸಭೆ ನಡೆಸಬೇಕು. ಮುಂದಿನ ಸಭೆವರಗೆ ಕಾಮಗಾರಿ ನಿಲ್ಲಿಸಿ ಜಲಸಿರಿ ಯೋಜನೆ ಚರ್ಚೆಯಿಂದ ಕೈಬಿಡುವಂತೆ ಆಗ್ರಹಿಸಿದರು.

ಇದಕ್ಕೆ ದ್ವನಿ ಸೇರಿಸಿದ ಗಿರೀಶ್ ದೇವಾಡಿಗ, ಶೇಖರ ಪೂಜಾರಿ, ದೇವಕಿ ಸಣ್ಣಯ್ಯ ಅರೆಬರೆ ಮಾಹಿತಿ ನೀಡಿದರೆ ಆಗೋದಿಲ್ಲ. ಜಲಸಿರಿ ಯೋಜನೆ ಚರ್ಚೆಯೇ ಅಪ್ರಸ್ತುತ. ಅಧಿಕಾರಿ ಬಂದ ನಂತರ ಚರ್ಚೆ ಮಾಡುವಂತೆ ಒತ್ತಾಯಿಸಿದರು. ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಅಧಿಕಾರಿ ಬಂದ ನಂತರ ಮತ್ತೊಮ್ಮೆ ಸಭೆ ನಡೆಸುವ ಘೋಷಣೆ ಮಾಡಿದ ನಂತರ ಜಲಸಿರಿ ಯೋಜನೆ ಚರ್ಚೆ ಕೈಬಿಡಲಾಯಿತು. ಸದಸ್ಯ ಚಂದ್ರಶೇಖರ್ ಖಾರ್ವಿ ಮುಂದಿನ ಸಭೆ ನಡೆಯುವ ತನಕ ಕಾಮಗಾರಿಗೆ ಅವಕಾಶ ನೀಡುವಂತೆ ಸಲಹೆ ಮಾಡಿದರು.

ಪುರಸಭೆ ಒಳಚರಂಡಿ ಯೋಜನೆ ಆರಂಭದಲ್ಲಿ 48.14 ಕೋಟಿ ರೂ.ಇದ್ದು, ಪ್ರಸಕ್ತ ಯೋಜನೆ ಅನುದಾನ 55.6 ಕೋಟಿ ಆಗಿದ್ದು, 24 ಕೋಟಿ ವೆಚ್ಚದ ಕಾಮಗಾರಿ ಮುಗಿದಿದೆ. ವೆಟ್‌ವೆಲ್, ಎಸ್‌ಟಿಪಿ ಕೆಲಸ ಬಾಕಿಯಿದ್ದು, ಪುರಸಭೆ ಜಾಗ ಒದಗಿಸಿದರೆ ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವುದಾಗಿ ಯುಜಿಡಿ ಅಭಿಯಂತರ ರಕ್ಷಿತ್ ಹೇಳಿದರು.

ಈಗಾಗಲೇ ಪುರಸಭೆ ಮೂರು ವೆಟ್‌ವೆಲ್ಲಿಗೆ ಜಾಗ ಕ್ಲಿಯರ್ ಮಾಡಿದ್ದು, ಇನ್ನೆರಡು ವೆಟ್‌ವೆಲ್‌ಗೆ ಜಾಗದ ಸಮಸ್ಯೆ ಪರಿಹರಿಸಿ ನೀಡಲಾಗುತ್ತದೆ. ಒಂದು ವಾರದಲ್ಲಿ ಭೂಮಿ ಕ್ಲಿಯರ್ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾದಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದರು.

ಕುಂದಾಪುರ ಪ್ಲೇ ಓವರ್ ಕಾಮಗಾರಿ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಆಡಳಿತ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯ ಚಂದ್ರಶೇಖರ ಖಾರ್ವಿ ಪ್ಲೇ ಓವರ್ ಕಾಮಗಾರಿ ನಿಧಾನಗತಿಗೆ ಶಾಸಕರು ಸಂಸದರು ಕಾರಣ ಎಂದು ಅರೋಪಿಸಿದ್ದು ಆಡಳಿತ ಪಕ್ಷದ ಸದಸ್ಯರ ಕೆರಳಿಸಿತು. ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಅಧಿಕಾರಿದಲ್ಲಿದ್ದಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲೂ ಆಗಿದ್ದು, ಅಂದು ಸುಮ್ಮನಿದ್ದು ಈಗ ಆರೋಪ ಮಾಡುವುದು ತರವಲ್ಲ. ಹೆದ್ದಾರಿ ಕಾಮಗಾರಿ ಆರಂಭವಾದ ನಂತರ ಪ್ಲೇ ಓವರ್, ಬೇರೆ ವಿನ್ಯಾಸಗಳು ಸೇರಿದ್ದು, ಶಾಸಕ, ಸಂಸದರು ಪ್ರಯತ್ನದಿಂದ ಕಾಮಗಾರಿ ನಡೆಯುತ್ತಿದೆ ಎಂದು ತಿರುಗೇಟು ನೀಡಿದರು. ಸುಖಾಸುಮ್ಮನೆ ಸಂಸದರು, ಶಾಸಕರ ಜರಿಯುವುದು ಸರಿಯಲ್ಲ ಎಂದು ಚುಚ್ಚಿದರು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Exit mobile version