ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಯಮದಂತೆ ಆಹಾರ ಧಾನ್ಯ ಪಡೆಯುತ್ತಿರುವ (ಬಿಪಿಎಲ್, ಎಎವೈ & ಎಪಿಎಲ್) ಕಾರ್ಡುದಾರರು ಹೊಸದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡಿನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಅಪ್ಲೋಡ್ ಮಾಡುವ ಕಾರ್ಯ ಜನವರಿ 1 ರಿಂದ ಪ್ರಾರಂಭಿಸಲಾಗಿದೆ.
ತಂತ್ರಾಂಶದಲ್ಲಿ ಮಾಹಿತಿ ಅಪ್‌ಲೋಡ್ ಮಾಡುವಾಗ ಪಡಿತರ ಕಾರ್ಡಿನ ಕುಟುಂಬದ ಹಿರಿಯ ಮಹಿಳಾ ಸದಸ್ಯರನ್ನು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬೇಕು ಮತ್ತು ಹೊಸ ಕುಟುಂಬದ ಮುಖ್ಯಸ್ಥರೊಂದಿಗೆ (ಹಿರಿಯ ಮಹಿಳಾ ಸದಸ್ಯ) ಇತರೆ ಸದಸ್ಯರ ಸಂಬಂಧದ ವಿವರಗಳನ್ನು ಹಾಗೂ ಪಡಿತರ ಚೀಟಿದಾರರ ಜಾತಿಯ ವಿವರವನ್ನು (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಇತರೆ) ಜಾತಿ ಪ್ರಮಾಣ ಪತ್ರ ವಿವರಗಳನ್ನು ಸಹ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಜಾತಿಯವರಾಗಿದ್ದಲ್ಲಿ ಸದ್ರಿ ಪಡಿತರ ಚೀಟಿದಾರರು ಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ನ್ಯಾಯಬೆಲೆ ಅಂಗಡಿಗೆ ಬರಬೇಕಾಗುವುದು. ನ್ಯಾಯಬೆಲೆ ಅಂಗಡಿ ಮಾಲಿಕರು ಸದ್ರಿ ಜಾತಿ ಪ್ರಮಾಣ ಪತ್ರದ ಸಂಖ್ಯೆ ನಮೂದಿಸಿ ತಮ್ಮ ಲಾಗಿನಲ್ಲಿಯೇ ಪರಿಶೀಲಿಸಿ, ಇತರೆವಿವರದೊಂದಿಗೆ ತಂತ್ರಾಂಶದಲ್ಲಿ ಮಾಹಿತಿಯನ್ನು ನಮೂದಿಸಲಾಗುವುದು.
ಕಾರ್ಡುದಾರರು ಕಾರ್ಡಿನಲ್ಲಿ ಇರುವ ಎಲ್ಲಾ ಸದಸ್ಯರೊಂದಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗೆ ತಪ್ಪದೇ ಕಡ್ಡಾಯವಾಗಿ ಹಾಜರಾಗಿ ತಮ್ಮ ಬಯೋ ದೃಢೀಕರಣ ಮೂಲಕ ಇ-ಕೆವೈಸಿ ಅಪ್‌ಡೇಟ್ ಮಾಡಬೇಕಾಗಿದ್ದು, ವಯೋವೃದ್ಧೆ ಮರಣ, ಕುಷ್ಠರೋಗಿ, ಅಂಗವಿಕಲ(ಬೆರಳುಗಳಿಲ್ಲದ) ಎಂಡೋಸಲ್ಫಾನ್, ಕುಟುಂಬದೊಂದಿಗೆ ವಾಸವಿರದ ಸದಸ್ಯರ ಇ-ಕೆವೈಸಿ ಅಪ್‌ಡೇಟ್ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತಹ ಸದಸ್ಯರಿಗೆ ಮಾತ್ರ ಇ-ಕೆವೈಸಿ ವಿನಾಯಿತಿಯನ್ನು ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿಯೇ ನೀಡಬಹುದಾಗಿದೆ.
ಈಗಾಗಲೇ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಅಥವಾ ತಿದ್ದುಪಡಿ ಮೂಲಕ ಇ-ಕೆವೈಸಿ ಆಗಿರುವ ಪಡಿತರ ಚೀಟಿದಾರರು ಇ-ಕೆವೈಸಿ ಮಾಡುವ ಅಗತ್ಯವಿರುವುದಿಲ್ಲ. ಉಳಿದ ಎಲ್ಲಾ ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.