Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು – ಶಿವಮೊಗ್ಗ- ಬೆಂಗಳೂರು ಕೆಎಸ್‌ಆರ್‌ಟಿಸಿ ರಾತ್ರಿ ಬಸ್ಸು ರದ್ದು, ಪ್ರಯಾಣಿಕರಿಗೆ ಸಂಕಷ್ಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಮೂರೂವರೆ ವರ್ಷಗಳಿಂದ ಸಂಚರಿಸುತ್ತಿದ್ದ ಕುಂದಾಪುರ – ಬೈಂದೂರು – ಶಿವಮೊಗ್ಗ – ಬೆಂಗಳೂರು ಮಾರ್ಗದ ಕೆಎಸ್‌ಆರ್‌ಟಿಸಿ ರಾತ್ರಿ ಬಸ್ ಸಂಚಾರ ಲಾಕ್‌ಡೌನ್ ಬಳಿಕ ಆರಂಭಗೊಳ್ಳದಿರುವುದು ಈ ಮಾರ್ಗದ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ.

ಕುಂದಾಪುರ ಡಿಪೋಗೆ ಸೇರಿದ ಬಸ್ಸು ಸಂಜೆ 6:30ಕ್ಕೆ ಕುಂದಾಪುರದಿಂದ ಹೊರಟು ಬೈಂದೂರು ಕೊಲ್ಲೂರು ಹೊಸನಗರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಅದೇ ದಿನ ರಾತ್ರಿ ಬೆಂಗಳೂರಿನಿಂದ ಹೊರಡುವ ಇನ್ನೊಂದು ಬಸ್ಸು ಬೆಳಿಗ್ಗೆ ಬೈಂದೂರು ತಲುಪುತ್ತಿತ್ತು. ಸಂಜೆಯ ವೇಳೆಗೆ ಬೈಂದೂರಿನಿಂದ ಕೊಲ್ಲೂರು, ಹೊಸನಗರ, ಶಿವಮೊಗ್ಗ ಹಾಗೂ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಹಾಗೂ ಬೆಂಗಳೂರಿನಿಂದ ರಾತ್ರಿ ಬರುವವರಿಗೆ ಇದು ಅನುಕೂಲಕರವಾಗಿತ್ತು. ಲಾಕ್‌ಡೌನ್ ಸಂದರ್ಭ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಮತ್ತೆ ಬಸ್ ಸೇವೆ ಆರಂಭಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದು, ನಷ್ಟದ ಕಾರಣವೊಡುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸನ್ನು ಲಾಕ್ಡೌನ್ ಬಳಿಕ ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಎಲ್ಲಾ ಮಾರ್ಗದ ಬಸ್ಸುಗಳಲ್ಲಿಯೂ ಆರಂಭದಲ್ಲಿ ಪ್ರಯಾಣಿಕರ ಕೊರತೆ ಇತ್ತು. ಈಗ ಬಹುಪಾಲು ಬಸ್ಸುಗಳಲ್ಲಿ ಪ್ರಯಾಣಿಕರು ತುಂಬಿರುತ್ತಾರೆ. ಬೈಂದೂರು ಕೊಲ್ಲೂರು ಶಿವಮೊಗ್ಗ ಮಾರ್ಗದಲ್ಲಿಯೂ ರಾತ್ರಿವೇಳೆಯಲ್ಲಿ ಸಂಚರಿಸಲು ಒಂದೇ ಬಸ್ ಇದ್ದಾಗ್ಯೂ ಅದನ್ನು ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಬಸ್ ಸೇವೆಯನ್ನು ಮತ್ತೆ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಈ ಬಗ್ಗೆ ಮಾಹಿತಿ ಪಡೆಯಲು ಕುಂದಾಪುರ ಡಿಪೋ ಮ್ಯಾನೆಜರ್ ಅವರನ್ನು ಕುಂದಾಪ್ರ ಡಾಟ್ ಕಾಂ ಸಂಪರ್ಕಿಸಲು ಪ್ರಯತ್ನಿಸಿತ್ತಾದರೂ ಅವರ ಕರೆ ಸ್ವೀಕರಿಸಲಿಲ್ಲ.

Exit mobile version