Kundapra.com ಕುಂದಾಪ್ರ ಡಾಟ್ ಕಾಂ

ನಾಕಟ್ಟೆ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ: ಎ.22ಕ್ಕೆ ಪ್ರತಿಷ್ಟಾ ಮಹೋತ್ಸವದ ದಿನ ನಿಗದಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಡ್ತರೆ ಗ್ರಾಮದ ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗಾಗಿ ಸಿದ್ಧಗೊಂಡ ಕೋಟಿ ಚೆನ್ನಯ್ಯ, ಪಂಜುರ್ಲಿ ಗರಡಿಯ ಮುಹೂರ್ತ ನಿಗದಿಯ ಪೂರ್ವಭಾವಿ ಸಭೆ ಗುರುವಾರ ನಡೆಯಿತು.

ಸಭೆಯಲ್ಲಿ ಎ.22ರಿಂದ 29ರ ವರೆಗೆ ಪ್ರತಿಷ್ಟಾ ಮಹೋತ್ಸವಕ್ಕೆ ದಿನ ನಿಗದಿಪಡಿಸಲಾಗಿದ್ದು, ಎ.25ರಂದು ಕೋಟಿ – ಚೆನ್ನಯ್ಯ ಪಂಜುರ್ಲಿ, ಬ್ರಹ್ಮಬೈದರ್ಕಳ ದೈವಗಳ ಪುನಃಪ್ರತಿಷ್ಟೆ, ಎ.26ರಂದು ಬ್ರಹ್ಮಕುಂಭಾಭಿಷೇಕ, ಎ.27ರಂದು ಬ್ರಹ್ಮಬೈದರ್ಕಳ ಜಾತ್ರಾ ಮಹೋತ್ಸವ ಹಾಗೂ ಎ.28ರಂದು ಪಂಜುರ್ಲಿ ದೈವದ ನೇಮೋತ್ಸವ ಮತ್ತು ಗೆಂಡಸೇವೆ ಮಾಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.

ತಂತ್ರಿಗಳಾದ ಕೇಂಜ ಶ್ರೀಧರ ತಂತ್ರಿ ಅವರು ಮಾತನಾಡಿ ಕೋಟಿಚೆನ್ನಯ್ಯರು ಎಲ್ಲರಿಗೂ ಆದರ್ಶ ಪುರುಷರಾದವರು. ಈ ಗರೋಡಿಯ ಜೀರ್ಣೋದ್ಧಾರಕ್ಕಾಗಿ ಶ್ರಮವಹಿಸಿ ಅತ್ಯಂತ ಮುತುವರ್ಜಿಯಿಂದ ಕೆಲಸ ಮಾಡಿದವರಿಗೂ ಮತ್ತು ಭಕ್ತವರ್ಗಕ್ಕೂ ದೈವ-ದೇವರ ಕೃಪೆ ದೊರೆಯುವಂತಾಗಲಿ. ಗರಡಿಯ ಮುಂದಿನ ಧಾರ್ಮಿಕ ಕಾರ್ಯವೂ ನಿರ್ವಿಘ್ನವಾಗಿ ನಡೆಯಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ, ಕಾರ್ಯದರ್ಶಿ ಯಡ್ತರೆ ಶಿವರಾಮ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ ಪೂಜಾರಿ ಮೇಲ್ಹಿತ್ಲು, ಗಣೇಶ ಪೂಜಾರಿ ಮೇಲ್ಹಿತ್ಲು, ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ, ನಾಕಟ್ಟೆ ಜಗನ್ನಾಥ ಶೆಟ್ಟಿ, ನಾಗರಾಜ ಗಾಣಿಗ ಬಂಕೇಶ್ವರ, ರಘುರಾಮ ಪೂಜಾರಿ ಶಿರೂರು ಎಂ. ವಿನಾಯಕ ಹೆಬ್ಬಾರ್, ಶಿಕ್ಷಕ ಶೇಖರ ಪೂಜಾರಿ, ಮೊದಲಾದವರು ಇದ್ದರು.

Exit mobile version