Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ವಿವೇಕಾನಂದ ಜಯಂತಿ, ಜಿ.ಎಸ್.ವಿ.ಎಸ್ ಅಸೋಸಿಯೇಷನ್‌ನಿಂದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಜಿ.ಎಸ್.ವಿ.ಎಸ್ ಅಸೋಷಿಯೇಷನ್, ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಬೆಂಗಳೂರಿನ ಉದಯ್ ಉಳ್ಳಾಲ್ ಪ್ರಾಯೋಜಕತ್ವದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಜಿ.ಎಸ್.ವಿ.ಎಸ್ ಅಸೋಷಿಯೇಷನ್ ವತಿಯಿಂದ ಕೊಡಲ್ಪಡುವ ವಿದ್ಯಾರ್ಥಿ ವೇತನಾ ವಿತರಣಾ ಕಾರ‍್ಯಕ್ರಮವು ಕಳೆದ ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳ ಸಭಾಂಗಣದಲ್ಲಿ ನಡೆಯಿತು.

ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಉಮೇಶ್ ಪುತ್ರನ್ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿವೇಕಾನಂದರ ಜೀವನಾದರ್ಶಗಳನ್ನು ಪಾಲಿಸಿ ಜೀವನವನ್ನು ಸುಂದರವಾಗಿಸಿಕೊಳ್ಳುವಂತೆ ಕರೆ ನೀಡಿದರು.

ಸಂದರ್ಭದಲ್ಲಿ ಪ್ರತೀ ವರುಷದಂತೆ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಪಿಸಿಎಮ್‌ಬಿ ಮತ್ತು ಪಿಸಿಎಮ್‌ಸಿ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದವರಿಗೆ ತಮ್ಮ ವತಿಯಿಂದ ನೀಡುವ ತಲಾ ಇಪ್ಪತೈದು ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಈ ಬಾರಿಯ ಟಾಪರ್‌ಗಳಾದ ಹಫ್ಸಾ ಮತ್ತು ವಿನಾಯಕ್ ನಾಯಕ್ ಇವರಿಗೆ ನೀಡಿದರು.

ಮುಂಬೈನ ದೇವೂ ಟೂಲ್ಸ್ ಮತ್ತು ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೆಶಕರಾದ ದೇವರಾಯ ಎಮ್ ಶೇರುಗಾರ್ ಅವರು ಶೈಕ್ಷಣಿಕ ಸಹಾಯಕ್ಕಾಗಿ ದತ್ತು ತೆಗೆದುಕೊಂಡ ಐದು ವಿದ್ಯಾರ್ಥಿಗಳಿಗೆ ನಗದನ್ನು ವಿತರಿಸಲಾಯಿತು. ಬೆಂಗಳೂರು ಪೈ ಹೋಟೆಲ್ಸ್ ಮಾಲಿಕರಾದ ಎಮ್ ಜಗನ್ನಾಥ ಪೈ ,ಹೆಚ್  ಗಣೇಶ್ ಕಾಮತ್ ಗಂಗೊಳ್ಳಿ, ಅಂಕಿತಾ ನಾಯಕ್ ಆಸ್ಟ್ರೇಲಿಯಾ, ಗಾಯತ್ರಿ ಹೊಳ್ಳ ಉಪ್ಪುಂದ, ಡಾ. ಕೆ. ಶ್ರೀಕಾಂತ್ ಕೊಲ್ಲೂರು, ಅಶ್ವಿನ್ ನಾಯಕ್ ಗಂಗೊಳ್ಳಿ ಮತ್ತಿತರ ದಾನಿಗಳು ಪ್ರಾಯೋಜಿಸಿದ ವಿದ್ಯಾರ್ಥಿ ವೇತನವನ್ನು ಅರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಟಾಪರ್ ಬಿಂದು ಕೋಟಾನ್ ಅವರಿಗೆ ಮಹಾಮಯಾ ಫೌಂಡೇಶನ್ ಮಣಿಪಾಲ ವತಿಯಿಂದ ಕೊಡಮಾಡಿದ ನಗದು, ಪ್ರಶಂಸಾಪತ್ರ ಮತ್ತು ಸ್ಮರಣಿಕೆಯ ಜೊತೆಗೆ ಅಧ್ಯಾಪಕರಿಂದ ನೀಡಲ್ಪಟ್ಟ ನಗದನ್ನು ನೀಡಲಾಯಿತು. ಸ.ವಿ.ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಆನ್ ಲೈನ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಡಾ. ಉಮೇಶ್ ಪುತ್ರನ್ ಅವರನ್ನು ಸನ್ಮಾನಿಸಲಾಯಿತು.

ಸುಮಾ ಉಮೇಶ್ ಪುತ್ರನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಜಿ.ಎಸ್.ವಿ.ಎಸ್ ಅಸೋಷಿಯೇಷನ್ ಅಧ್ಯಕ್ಷರಾದ ಡಾ. ಕಾಶೀನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಿದ್ಯಾ ಸಂಸ್ಥೆಗಳ ಕಾರ‍್ಯದರ್ಶಿ ಎನ್.ಸದಾಶಿವ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿ.ಎಸ್.ವಿ.ಎಸ್

ಅಸೋಷಿಯೇಷನ್ ಕಾರ‍್ಯದರ್ಶಿ ಹೆಚ್. ಗಣೇಶ್ ಕಾಮತ್, ಕಾಲೇಜಿನ ಪ್ರಾಂಶುಪಾಲೆ ಕವಿತಾ. ಎಮ್.ಸಿ, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಧ್ಯಾಯ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ‍್ಯಕ್ರಮ ನಿರೂಪಿಸಿದರು. ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಉಪ ಪ್ರಾಂಶುಪಾಲರಾದ ಉಮೇಶ್ ಕರ್ಣಿಕ್ ವಂದಿಸಿದರು.

Exit mobile version