ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೇರಂಜಾಲಿನ ರಜತಾದ್ರಿ ಫಾರ್ಮ್‌ನಲ್ಲಿ ಜೇನು ಸಾಕಣೆ ಪರಿಣತ ಉದಯಶಂಕರ ಭಟ್ ಅವರು 50 ಜೇನು ಪೆಟ್ಟಿಗೆಗಳೊಂದಿಗೆ ಆರಂಭಿಸಿರುವ ಪರಾಗ ಜೇನು ಸಾಕಣೆ ಘಟಕದ ಉದ್ಘಾಟನೆ ಇತ್ತಿಚಿಗೆ ನಡೆಯಿತು.
ಹಿರಿಯ ತೋಟಗಾರಿಕಾ ಅಧಿಕಾರಿ ಕುಚೇಲಯ್ಯ ಮಾತನಾಡಿ, ಜೇನು ಸಾಕಣೆಯಿಂದ ಮನುಷ್ಯನ ಆರೋಗ್ಯ ರಕ್ಷಣೆಗೆ, ಔಷಧಕ್ಕೆ ಅಗತ್ಯವಿರುವ ಜೇನು ಸಿಗುತ್ತದೆ. ಅದು ಪ್ರಕೃತಿಯ ಉಳಿವು ಮತ್ತು ಸಮೃದ್ಧಿಗೂ ಕಾರಣವಾಗುತ್ತದೆ. ಕೃಷಿಯ ಜತೆಗೆ ಜೇನು ಸಾಕುವುದರಿಂದ ರೈತರ ಆದಾಯ ಹೆಚ್ಚುತ್ತದೆ ಎಂದು ಹೇಳಿದರು.
ಅತಿಥಿ, ಕೃಷಿ ಅಧಿಕಾರಿ ಪರಶುರಾಮ ಮಾತನಾಡಿ, ಜೇನುನೊಣಗಳು ಹೂವುಗಳಿಂದ ಮಕರಂದ ಸಂಗ್ರಹಿಸುವಾಗ ಪರಾಗ ಸ್ಪರ್ಷ ಏರ್ಪಟ್ಟು ಕೃಷಿಯ ಫಲವರ್ಧನೆ ಆಗುತ್ತದೆ. ಅದಕ್ಕಾಗಿ ಜೇನನ್ನು ರೈತಮಿತ್ರ ಕೀಟ ಎಂದು ಪರಿಗಣಿಸಲಾಗುತ್ತದೆ. ತೋಟಗಳಲ್ಲಿ ಜೇನು ಸಾಕಣೆ ಮಾಡುವುದರಿಂದ ಅಲ್ಲಿ ಹೆಚ್ಚು ಫಸಲು ದೊರೆತು, ರೈತರಿಗೆ ಲಾಭವಾಗುತ್ತದೆ ಎಂದರು. ಫಾರ್ಮ್ ಮಾಲೀಕ ಸುಧೀರ ರಾವ್ ಅಧ್ಯಕ್ಷತೆ ವಹಿಸಿದ್ದರು.
ಜೇನು ಕೃಷಿ ಕುರಿತು ಮಾರ್ಗದರ್ಶನ ನೀಡಿದ ಪರಿಣತ ಉದಯಶಂಕರ ಭಟ್ ಜೇನು ಸಾಕಣೆ, ಜೇನು ಕುಟುಂಬದ ನಿರ್ವಹಣೆ, ಜೇನು ಸಂಗ್ರಹ ಹೇಗೆ ಮಾಡಬೇಕು ಎನ್ನುವುದರ ಮಾಹಿತಿ ನೀಡಿದರು. ಜೇನು ಸಾಕಣೆಗೆ ಮುಂದೆ ಬರುವವರಿಗೆ ಅಗತ್ಯ ಪರಿಕರ ಮತ್ತು ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.
ಪರಿಸರದ ಹತ್ತು ಆಸಕ್ತ ರೈತರಿಗೆ ಜೇನು ಕುಟುಂಬ ಸಹಿತವಾದ ಪೆಟ್ಟಿಗೆಗಳನ್ನು ಕೊಡಲಾಯಿತು.