Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಬಡಾಕೆರೆ ಸೊಸೈಟಿಯಿಂದ ರೈತಮಿತ್ರ, ಪುಪ್ಪಕ ಯೋಜನೆಗೆ ಚಾಲನೆ: ಎಸ್. ರಾಜು ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ತನ್ನ ರೈತಮಿತ್ರ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಅದರ 3686 ಸದಸ್ಯರಿಗೆ ರೂ 34.24 ಕೋಟಿ ಸಾಲ ನೀಡಿದೆ. ಅವರಲ್ಲಿ 410 ಸದಸ್ಯರಿಂದ ಬಾಕಿಯಾಗಿರುವ ರೂ. 4.85 ಕೋಟಿ ಸಾಲಕ್ಕೆ ಶೇ.2 ಬಡ್ಡಿ ರಿಯಾಯಿತಿ ನೀಡಲು ಹಾಗೂ ದಂಡನೆ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ಸಂಘದ ನಾವುಂದ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು. ಮಾರ್ಚ್ 31ಕ್ಕೆ ಮುನ್ನ ಸಾಲ ಮರುಪಾವತಿ ಮಾಡುವವರಿಗೆ ಇದು ಅನ್ವಯವಾಗಲಿದೆ. ಇದರ ಮೊತ್ತ ರೂ. 65 ಲಕ್ಷ ಆಗಲಿದೆ. ಸಂಘವು ಸದಸ್ಯರಿಗೆ ರೂ. 2 ಲಕ್ಷ ವರೆಗಿನ ಬಡ್ಡಿ ರಹಿತ ಬೆಳೆಸಾಲ ನೀಡುತ್ತಿದೆ. ವ್ಯಾಪ್ತಿಯಲ್ಲಿ ಕೃಷಿಭೂಮಿ ಪಹಣಿ ಹೊಂದಿರುವ ಎಲ್ಲ ಸದಸ್ಯರು ಹಾಗೂ ವ್ಯವಸಾಯಗಾರರು ಇದರ ಲಾಭ ಪಡೆಯಬೇಕು ಎಂಬ ದೃಷ್ಟಿಯಿಂದ ಅಭಿಯಾನದ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಸಂಘವು ಪುಷ್ಪಕ ಯೋಜನೆಯನ್ವಯ ಶೇ 12.5 ಬಡ್ಡಿಯಲ್ಲಿ ವಾಹನ ಖರೀದಿ ಸಾಲ ನೀಡುತ್ತದೆ. ರೂ.10 ಲಕ್ಷದ ವರೆಗೆ ಶೇ.2 ದರದಲ್ಲಿ ಕೃಷಿ ಅಭಿವೃದ್ಧಿ ಸಾಲ ವಿತರಿಸುತ್ತದೆ. ಕೃಷಿಯೇತರ ಸಾಲವಾಗಿ ಆಸ್ತಿ ಖರೀದಿ ಸಾಲ, ಗೃಹ ನಿರ್ಮಾಣ ಸಾಲ, ವೇತನ ಆಧರಿತ ಸಾಲ, ಠೇವಣಿ ಜವಾಬ್ದಾರಿ ಸಾಲ, ಸ್ಥಿರಾಸ್ತಿ ಅಡವಿನ ಸಾಲ, ಓವರ್ ಡ್ರಾಫ್ಟ್ ಸಾಲ, ವೃತ್ತಿ ಸಾಲ ಮತ್ತು ವೈಯಕ್ತಿಕ ಸಾಲ ನೀಡುತ್ತದೆ. ನವೋದಯ ಸ್ವಸಹಾಯ ಸಂಘಗಳಿಗೆ ರೂ.10 ಲಕ್ಷದ ವರೆಗಿನ ಸಾಲ ಕೊಡಲಾಗುತ್ತಿದೆ ಎಂದು ಅವರು ಹೇಳಿದರು. ಜಾನುವಾರು ಡೇರಿ ಘಟಕ ಸಾಲ ಯೋಜನೆಯಲ್ಲಿ ಶೇ.2 ಬಡ್ಡಿಯಲ್ಲಿ ರೂ.8.99 ಲಕ್ಷದ ವರೆಗಿನ ಸಾಲ ಲಭ್ಯವಿದೆ ಎಂದ ಅವರು ಸಂಘವು ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕರಿಸುತ್ತದೆ. ಹಿರಿಯ ನಾಗರಿಕರಿಗೆ ಶೇ.0.5 ಅಧಿಕ ಬಡ್ಡಿ ನೀಡುತ್ತದೆ. ಕಲ್ಪತರು ನಗದು ಪತ್ರದಲ್ಲಿ ಮಾಡುವ ಹೂಡಿಕೆ 96 ತಿಂಗಳಿನಲ್ಲಿ ದ್ವಿಗುಣಗೊಳ್ಳುತ್ತದೆ ಎಂದು ಹೇಳಿದರು.

ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಜಗದೀಶ ಪೂಜಾರಿ, ಭೋಜ ನಾಯ್ಕ್, ಪ್ರಕಾಶ ದೇವಾಡಿಗ, ರಾಮಕೃಷ್ಣ ಖಾರ್ವಿ, ನರಸಿಂಹ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ಎಂ. ನಾಗಮ್ಮ, ಸರೋಜಾ ಗಾಣಿಗ, ರಾಮ, ಎಂ. ವಿನಾಯಕ ರಾವ್, ಅಶೋಕಕುಮಾರ ಶೆಟ್ಟಿ, ವಲಯ ಮೇಲ್ವಿಚಾರಕ ಶಿವರಾಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ಇದ್ದರು.

Exit mobile version