Kundapra.com ಕುಂದಾಪ್ರ ಡಾಟ್ ಕಾಂ

ಕೋವಿಡ್ ಲಸಿಕೆ ಬಂತೆಂದು ಮೈಮರೆಯದಿರಿ: ಡಾ. ಪ್ರೇಮಾನಂದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದೇಶಗಳಲ್ಲಿ ಈಗ ಕೊರೊನಾದ ಎರಡನೇ ಅಲೆ ಕಾಡುತ್ತಿದೆ. ನಮ್ಮಲ್ಲಿ ಅದರ ವಿರುದ್ಧ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಹಾಗೆಂದು ಯಾರೂ ಮೈಮರೆಯಬಾರದು’ ಎಂದು ಕೋವಿಡ್ ನೋಡಲ್ ಅಧಿಕಾರಿ ಡಾ. ಪ್ರೇಮಾನಂದ ಮನವಿ ಮಾಡಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಕೋವಿಡ್-19 ಪ್ರಥಮ ಹಂತದ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಸಿಕೆಯ ಮೊದಲ ಡೋಸ್ ಪಡೆದ ಅವರು ಕೋವಿಡ್ ಲಸಿಕೆ ಪಡೆಯುವುದು ಒಂದು ಒಳ್ಳೆಯ ಅನುಭವ. ವದಂತಿಗಳಿಗೆ ಕಿವಿಗೊಡದೆ, ದೇಶಿ ಲಸಿಕೆ ಮೇಲೆ ವಿಶ್ವಾಸವಿರಿಸಿ, ಪ್ರತಿಯೊಬ್ಬರೂ ಲಸಿಕೆ ಪಡೆದುಕೊಂಡು ಕೋವಿಡ್ ನಿಂದ ರಕ್ಷಣೆ ಪಡೆಯಬೇಕು. 28 ದಿನಗಳ ಅಂತರದಲ್ಲಿ ಎರಡನೆಯ ಡೋಸ್ ಪಡೆಯುವುದು ಕಡ್ಡಾಯ ಎಂದರು.

50 ಆರೋಗ್ಯ ಸಿಬ್ಬಂದಿ ಪ್ರಥಮ ಹಂತದ ಲಸಿಕೆ ಪಡೆದರು. ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಯಿತು. ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ನಂದಿನಿ, ಶಸ್ತ್ರಚಿಕಿತ್ಸಕ ಡಾ. ಮಹೇಂದ್ರಕುಮಾರ್ ಶೆಟ್ಟಿ, ಸಹಾಯಕ ವೈದ್ಯಾಧಿಕಾರಿ ಡಾ. ಗೌತಮ್, ಆಯುಷ್ ವೈದ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ್, ದಂತವೈದ್ಯೆ ಡಾ. ವತ್ಸಲಾ, ಫಾರ್ಮಸಿಸ್ಟ್ ಶಂಭು ಗಾಣಿಗ, ಹಿರಿಯ ಆರೋಗ್ಯ ಸಹಾಯಕಿ ಶಾಂತಿ ಬಾಯಿ, ವ್ಯಾಕ್ಸಿನೇಟರ್ ಮಂಜುಳಾ, ಆರೋಗ್ಯ ಸಹಾಯಕಿಯರು, ಲ್ಯಾಬ್ ಟೆಕ್ನಿಷನ್ಸ್, ಸಿಬ್ಬಂದಿ , ವಸಂತಿ ಇದ್ದರು. ವಾಕ್ಸಿನೇಶನ್ ವಿಭಾಗವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.

Exit mobile version