Kundapra.com ಕುಂದಾಪ್ರ ಡಾಟ್ ಕಾಂ

ಕೆರ್ಗಾಲ್ ಗ್ರಾಮಸಭೆಯಲ್ಲಿ ಆಕ್ಷೇಪದ ಹೊಗೆ

ಬೈಂದೂರು: ಕೆರ್ಗಾಲು ಗ್ರಾಮ ಪಂಚಾಯತ್‌ನ 2015-16ನೆ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಅಧ್ಯಕ್ಷೆ ಸೋಮು ಅಧ್ಯಕ್ಷತೆ ವಹಿಸಿದ್ದರು.

ಕಳೆದ ವರ್ಷದ ಆದಾಯ ಮತ್ತು ವೆಚ್ಚದ ವಿವರ ಮಂಡನೆಯಾಗುತ್ತಿದ್ದಂತೆ ಕೆಲವು ಗ್ರಾಮಸ್ಥರು ಪ್ರಶ್ನೆ, ಆಕ್ಷೇಪಗಳ ಸುರಿಮಳೆಗೈದರು. ಮಂಜುನಾಥ ಎಂಬವರು ಭಗವತಿ ದೇವಸ್ಥಾನ ಮಾರ್ಗದಲ್ಲಿ ಚರಂಡಿ ರಚನೆಯಾಗದಿದ್ದರೂ ವ್ಯಯದಲ್ಲಿ ತೋರಿಸಲಾಗಿರುವುದಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಭಾಸ್ಕರ, ಹಿಂದಿನ ಅಧ್ಯಕ್ಷೆ ರೇವತಿ ಪೂಜಾರಿ ಧ್ವನಿಗೂಡಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಅಭಿವೃದ್ಧಿ ಅಧಿಕಾರಿ ಆನಂದ ಆ ರಸ್ತೆಗೆ ಚರಂಡಿ ನಿರ್ಮಿಸಲು ಆಕ್ಷೇಪಣೆ ಬಂದ ಕಾರಣ ಆ ಕಾಮಗಾರಿಯನ್ನು ಯಕ್ಷೇಶ್ವರಿ ಮಾರ್ಗದಲ್ಲಿ ಮಾಡಲಾಗಿದೆ ಎಂದರು. ಗಣೇಶ ಎಲ್ಲ ಕಾಮಗಾರಿಗಳ ವಿವರ ಬೇಕು ಎಂದು ಪಟ್ಟುಹಿಡಿದರು. ಒಂದು ಹಂತದಲ್ಲಿ ರೇವತಿ ಪೂಜಾರಿ ಅಧ್ಯಕ್ಷರೇ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು. ಮಾರ್ಗದರ್ಶಿ ಅಧಿಕಾರಿ ಪಶುವೈದ್ಯ ಶಂಕರ ಶೆಟ್ಟಿ, ಉಪಾಧ್ಯಕ್ಷ ಸುಂದರ ಕೊಠಾರಿ ಮತ್ತು ಕೆಲವು ಸದಸ್ಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪ್ರಶ್ನೆ ಕೇಳಿದವರಿಗೆ ಉತ್ತರ ಮುಖ್ಯವೇ ಹೊರತು ಯಾರು ಉತ್ತರಿಸುತ್ತಾರೆನ್ನುವುದು ಅಪ್ರಸ್ತುತ ಎಂದರು.

   ಕೆಲವೇ ಜನರು ಪ್ರಶ್ನೆ, ಆಕ್ಷೇಪ ವ್ಯಕ್ತಪಡಿಸುತ್ತ ಸಭೆಯ ಸುಗಮ ಕಾರ್ಯಕಲಾಪಕ್ಕೆ ಅಡ್ಡಿಯಾಗುತ್ತಿದ್ದುದು ಕಂಡುಬಂತು. ಗೊಂದಲ ಸೃಷ್ಟಿಯಾದಾಗ ಮಧ್ಯ ಪ್ರವೇಶಸಿದ ಮಾಜಿ ಸದಸ್ಯ ಎಂ. ಗೋವಿಂದ ಗ್ರಾಮಸ್ಥರಿಗೂ, ಅಧಿಕಾರಿಗಳಿಗೂ ಮಾರ್ಗದರ್ಶನ ಮಾಡುವ ಮೂಲಕ ಸಭೆಯನ್ನು ತಹಬಂದಿಗೆ ತರಲು ನೆರವಾದರು.

ಶಿಶು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನಿವೇದಿತಾ, ತೋಟಗಾರಿಕೆ ಇಲಾಖೆಯ ರೇಷ್ಮಾ, ಕೃಷಿ ಸಹಾಯಕ ಗೋಪಾಲ, ಸಹಕಾರಿ ಸಂಘದ ಉದ್ಯೋಗಿ ಹಾವಳಿ ಬಿಲ್ಲವ ತಮ್ಮ ವ್ಯಾಪ್ತಿಯ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಶಿಕ್ಷಣ, ಕಂದಾಯ, ಅರಣ್ಯ, ಮೆಸ್ಕಾಂ ಅಧಿಕಾರಿಗಳ ಗೈರು ಹಾಜರಿಗೆ ಆಕ್ಷೇಪ ಕೇಳಿಬಂತು. ಎಲ್ಲ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Exit mobile version