Kundapra.com ಕುಂದಾಪ್ರ ಡಾಟ್ ಕಾಂ

ಕೊಡಚಾದ್ರಿ ಬುಡಕ್ಕೆ ಬೀಳಲಿದೆಯೇ ಕೊಡಲಿ ಏಟು?

ಕೊಡಚಾದ್ರಿ ಸಹ್ಯಾದ್ರಿಯ ಮೇರು ಶಿಖರಗಳಲ್ಲಿ ಒಂದೆನಿಸಿಕೊಂಡಿರುವ ಬೆಟ್ಟ. ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕೊಡಚಾದ್ರಿ ಬೆಟ್ಟಕ್ಕೂ ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೂ ನಂಟಿದ್ದು, ಕೊಲ್ಲೂರಿನ ಭಕ್ತರಿಗೂ ಪುಣ್ಯಸ್ಥಳವೆನಿಸಿದೆ. ಇದು ಸೌಪರ್ಣಿಕಾ ನದಿಯ ಉಗಮ ಸ್ಥಾನವು ಹೌದು. ವಿವಿಧ ರೀತಿಯ ಔಷಧಿ ಗಿಡಗಳು ಅನೇಕ ಜಾತಿಯ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನವು ಹೌದು.

ಆದರೆ ಇತ್ತೀಚಿನ ದಿನಗಳಲ್ಲಿ ಕೊಡಚಾದ್ರಿ ಮಡಿಲಿಗೆ ಕೊಡಲಿ ಏಟು ನೀಡುವುದಕ್ಕೆ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಂತಿದೆ. ಕೊಲ್ಲೂರಿನಿಂದ ಕೊಡಚಾದ್ರಿಯ ಶಿಖರಕ್ಕೆ ರೋಪ್‌ವೇ ನಿರ್ಮಿಸಬೇಕೆಂಬುದು ಸರ್ಕಾರದ ನಿಲುವು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಿದರೂ, ಮೂಕಾಂಬಿಕಾ ರಕ್ಷಿತಾರಣ್ಯದ ನಡುವೆ ರೋಪ್‌ವೇ ಹಾದುಹೋಗುವುದರಿಂದ ಮರಗಳು ಹಾಗೂ ಅಲ್ಲಿನ ಜೀವ ವೈವಿಧ್ಯತೆಗಳಿಗೆ ತೊಂದರೆಯಾಗುವ ಸಾಧ್ಯತೆ ದಟ್ಟವಾಗಿದೆ.

ಕೊಲ್ಲೂರಿನಿಂದ ಕೊಡಚಾದ್ರಿಗೆ ಈ ರೋಪ್ ವೇ ಸಂಪರ್ಕದಿಂದ ಪ್ರಯಾಣ ಹತ್ತಿರವಾರೂ ಕಾಮಗಾರಿಯಿಂದಾಗಿ ಅರಣ್ಯ ನಾಶವಾಗುತ್ತದೆ, ದಿನನಿತ್ಯ ತಮ್ಮ ಹೊಟ್ಟೆ ಪಾಡಿಗೆ ಬದುಕುತ್ತಿರುವ ಜೀಪ್‌ನ ಚಾಲಕರು ಸಂಕಟ ಪಡಬೇಕಾಗುತ್ತದೆ. ಕೊಡಚಾದ್ರಿಗೆ ರೋಪ್ ವೇ ಸಂಪರ್ಕದ ಮೂಲಕ ಪ್ರವಾಸಿಗ ಮೋಜು ಮಸ್ತಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕೊಡಚಾದ್ರಿ ಧಾರ್ಮಿಕ ತಾಣವೇ ಹೊರತು ಅದು ಪ್ರವಾಸಿತಾಣ ಅಲ್ಲ ಎಂಬುದನ್ನು ಸರಕಾರ ಗಮನಿಸಬೇಕಿದೆ.

ಈಗಾಗಲೇ ಪರಿಸರವಾದಿಗಳು ಮತ್ತು ಸ್ಥಳಿಯರು ವಿರೋಧ ವ್ಯಕ್ತಪಡಿಸಿ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದಾರೆ. ಏನೇ ಆದರೂ ಕೊಡಚಾದ್ರಿ ನಮ್ಮದು, ಅದೆಲ್ಲರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ನಾಗರಿಕರು ಅರಿಯಬೇಕಿದೆ.

Exit mobile version