Site icon Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರ ಮಟ್ಟದ ಭರತನಾಟ್ಯ ಸ್ವರ್ಧೆ: ಸಿಂಚನಾ ನೆಂಪು ಪ್ರಥಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎನ್‌ಸಿಇಆರ್‌ಟಿ ನವದೆಹಲಿ ಶಾಲಾಶಿಕ್ಷಣ ಸಚಿವಾಲಯ ಭಾರತ ಸರಕಾರವು 2020-21ನೇ ಸಾಲಿನಲ್ಲಿ ಶಿಕ್ಷಣದಲ್ಲಿ ಕಲೆಯನ್ನು ಉತ್ತೇಜಿಸಲು ಹಾಗೂ ದೇಶದ ಸಾಂಸ್ಕೃತಿಕ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಮೂಡಿಸುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ‘ಕಲೋತ್ಸ’ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದರಲ್ಲಿ ಒಂದಾಗಿರುವ ರಾಷ್ಟ್ರ ಮಟ್ಟದ ವಿದ್ಯಾರ್ಥಿನಿಯರ ‘ಭರತನಾಟ್ಯ ಸ್ಪರ್ಧೆ’ಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಂಚನಾ ನೆಂಪು ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ವಕೀಲ ವೃತ್ತಿಯಲ್ಲಿರುವ ಕುಂದಾಪುರದ ರಾಜಕುಮಾರ್ ನೆಂಪು ಮತ್ತು ಪ್ರತಿಮಾ ಇವರ ಪುತ್ರಿಯಾಗಿರುವ ಸಿಂಚನಾ ಈಗಾಗಲೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ಹಂಸ ಭ್ರಮರಿ ಬೆಂಗಳೂರು, ಹೆಜ್ಜೆ ಗೆಜ್ಜೆ ಉಡುಪಿ, ಡ್ಯಾನ್ಸ್ ಜಾತ್ರೆ ಧಾರವಾಡ , ರವೀಂದ್ರ ಕಲಾಕ್ಷೇತ್ರಬೆಂಗಳೂರು, ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್, ಹನಿವೆಲ್ ಕಂಪನಿ ಬೆಂಗಳೂರು, ದಿಕ್ಸೂಚಿ ನಾಟ್ಯಾಲಯ ಬೆಂಗಳೂರು, ಇನ್ ಸೈಟ್ ಫೌಂಡೇಶನ್ ಯು.ಎಸ್.ಎ ನಡೆಸಿದ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ತನ್ನದಾಗಿಸಿಕೊಂಡಿರುತ್ತಾರೆ.

ರಾಷ್ಟ್ರ ಮಟ್ಟದಲ್ಲಿ ಸಾಧನೆ ಮೆರೆದ ವಿದ್ಯಾರ್ಥಿನಿಯನ್ನು ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಟ್ರಸ್ಟನ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Exit mobile version