Kundapra.com ಕುಂದಾಪ್ರ ಡಾಟ್ ಕಾಂ

ಖಂಬದಕೋಣೆ ರೈ.ಸೇ.ಸ ಸಂಘ: ‘ರೈತರೆಡೆಗೆ ಸಹಕಾರಿ ನಡಿಗೆ’ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೈತರು ದುಡಿಮೆಯ ಮೂಲಕ ಆದಾಯ ಹೆಚ್ಚಿಸಿಕೊಂಡು, ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಸಾಧ್ಯವಾಗುವಂತೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ಸೂಕ್ತ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ‘ರೈತರೆಡೆಗೆ ಸಹಕಾರಿ ನಡಿಗೆ’ ಎಂಬ ವಿನೂತನ ಅಭಿಯಾನ ಕೈಗೊಂಡಿದೆ ಎಂದು ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಸಹಕಾರಿ ಸಂಘ, ರೈತಸಿರಿ ಹಾಗೂ ರೈತ ಸೇವಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಕೆರ್ಗಾಲು ಗ್ರಾಮದ ಚೆರುಮಕ್ಕಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಸಂಘದಿಂದ ರೈತರಿಗೆ ಒದಗಿಸುತ್ತಿರುವ ಸೌಲಭ್ಯಗಳ ಮಾಹಿತಿಯನ್ನು ಮತ್ತು ಲಾಭದಾಯಕ ಕ್ರಮಗಳ ಅರಿವನ್ನು ವ್ಯಾಪ್ತಿಯ ಎಲ್ಲ ರೈತರಿಗೆ ತಲುಪಿಸುವುದು ‘ರೈತರೆಡೆಗೆ ಸಹಕಾರಿ ನಡಿಗೆ’ ಕಾರ್ಯಕ್ರಮದ ಉದ್ದೇಶ. ಕೃಷಿ ಇಂದು ವಿಜ್ಞಾನವಾಗಿ ಪರಿವರ್ತಿತವಾಗಿದೆ. ರೈತರು ಪರಿಣಿತರಿಂದ ವೈಜ್ಞಾನಿಕ ಮಾಹಿತಿ ಪಡೆದು, ಆಧುನಿಕ ವಿಧಾನ ಮತ್ತು ಯಂತ್ರೋಪಕರಣ ಬಳಸಿ ಕೃಷಿಯಿಂದ ಲಾಭ ಗಳಿಸಬೇಕು. ಪ್ರತಿ ಗ್ರಾಮದಲ್ಲಿ ರೈತ ಸಂಘಟನೆ ಇರಬೇಕು. ರೈತರು ತಮ್ಮ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ಸಮರ್ಪಕ ಬೆಲೆ ಪಡೆಯಲು ಇರುವ ಅಡ್ಡಿಯನ್ನು ಪರಿಹರಿಸಿಕೊಳ್ಳಬೇಕು. ಅವರು ಬೆಳೆದ ಕೃಷಿ ಉತ್ಪನ್ನಗಳಿಗೆ ಅವರೇ ಮಾರುಕಟ್ಟೆ ಸೃಷ್ಟಿಸಿಕೊಂಡಾಗ ಅದು ಸಾಧ್ಯವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಮೂರು ಎಕರೆ ಸ್ಥಳವನ್ನು ಲೀಸ್‌ಗೆ ಪಡೆದು ಸಾವಯವ ಗೊಬ್ಬರ ಬಳಸಿ ಸುಮಾರು 20ಕ್ಕೂ ಹೆಚ್ಚು ಬಗೆಯ ತರಕಾರಿ ಬೆಳೆಸಿ ಉತ್ತಮ ಫಸಲು ಪಡೆದು ಲಾಭ ಗಳಿಸುವ ಮೂಲಕ ಪರಿಸರದ ರೈತರಿಗೆ ಮಾದರಿಯಾದ ಹಿರಿಯ ಕೃಷಿಕ ಲಕ್ಷ್ಮಣ ದೇವಾಡಿಗ ಅವರನ್ನು ಗೌರವಿಸಲಾಯಿತು. ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ವಿಷ್ಣು ಆರ್. ಪೈ, ಕಿಸಾನ್ ಸಂಘದ ಅಧ್ಯಕ್ಷ ಎಚ್. ಜಗದೀಶ್ ರಾವ್, ಪ್ರಗತಿಪರ ರೈತ ದಿನೇಶ ಗಾಣಿಗ ಇದ್ದರು. ಸಂಘದ ಕೃಷಿ ಅಭಿವೃದ್ಧಿ ಅಧಿಕಾರಿ ಈಶ್ವರ ನಾಯ್ಕ್ ಸ್ವಾಗತಿಸಿ, ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ವಂದಿಸಿದರು.

Exit mobile version