ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಪಾರಂಪರಿಕಾ ಔಷಧ ಭಂಡಾರ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಔಷಧ ಗಿಡ ಮೂಲಿಕಾ ಪ್ರಾಧಿಕರ ಬೆಂಗಳೂರು ಇವರ ಸಹಯೋಗದೊಂದಿಗೆ ‘ಅಶೋಕ ವನಸಿರಿ’ ಎಂಬ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದವತಿಯಿಂದ ಮೂಡುಬಿದಿರೆ ಪರಿಸರದಲ್ಲಿ 1500 ಅಶೋಕ ಗಿಡಗಳನ್ನು ಹಂಚಿ, ಜನರಲ್ಲಿ ಈ ಗಿಡದ ಪ್ರಾಮುಖ್ಯತೆಯನ್ನು ಇನ್ನು ಹೆಚ್ಚು ತಿಳಿಸಲಾಗುವುದು, ಇಂದು ಎಷ್ಟೋ ಗಿಡಮೂಲಿಕೆಗಳು ನಶಿಸಿ ಹೋಗುತ್ತಿದ್ದು, ಅವುಗಳ ಸಂರಕ್ಷಣೆ ಮಾಡಬೇಕಿದೆ. ನಮ್ಮ ದೇಶದ ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು ಎಲ್ಲೆಡೆ ಪಸರಿಸಬೇಕಿದೆ ಎಂದರು.
ಕರ್ನಾಟಕ ರಾಜ್ಯ ಔಷಧ ಸಸ್ಯಗಳ ಪ್ರಾಧಿಕಾರದ ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿ ಸುದರ್ಶನ ಜಿ.ಎ. ಮಾತನಾಡಿ, ಆತ್ಮ ನಿರ್ಭರ ಭಾರತದ ಕನಸನ್ನು ನನಸು ಮಾಡಲು ನಮ್ಮ ಪರಂಪರೆಯಲ್ಲಿ ಅಡಗಿದ ಆಯುರ್ವೇದ ವ್ಯವಸ್ಥೆಗೆ ಮೊದಲ ಪ್ರಾಶಸ್ತ್ಯ ನೀಡಿ ನಾವು ಆಳವಡಿಸಿಕೊಳ್ಳಬೇಕು ಎಂದರು.
ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನಾಡಲ್‌ಕಾರ್ ಮಾತನಾಡಿ, ಯೋಗ ಮತ್ತು ಆಯುರ್ವೇದ ಉಪಯುಕ್ತತೆಯನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಹಾಗೂ ಆಶೋಕ ವೃಕ್ಷದ ಉಪಯುಕ್ತತೆಯನ್ನು ಸಾರ್ವಜನಿಕರಿಗೆ ತಿಳಿಸಿ ಅದರ ಮಹತ್ವ ಎಲ್ಲರೂ ಅರಿಯುವಂತಾಗಬೇಕು ಎಂದು ತಿಳಿಸಿದರು.
ಒಂದು ದಿನದ ವಿಚಾರ ಸಂಕಿರಣದಲ್ಲಿ ವಿವಿಧ ಆರು ವಿಷಯಗಳ ವಿಚಾರ ಗೋಷ್ಠಿ ಹಾಗೂ ಅಶೋಕ ವನಸಿರಿಗೆ ಸಂಬದಿಸಿದ ಪ್ಯಾನಲ್ ಡಿಸ್ಕಶನ್ ನಡೆಯಿತು.
ದಕ್ಷಿಣ ಹಾಗೂ ಉಡುಪಿ ಜಿಲ್ಲೆಯ 36 ಅರಣ್ಯ ಇಲಾಖೆಯ ಅಧಿಕಾರಿಗಳು, ಮೂಡುಬಿದಿರೆ, ಕಾರ್ಕಳ ಹಾಗೂ ಮಂಗಳೂರು ವಲಯದ ರೈತ ಸಂಘದಿಂದ 30 ಮಂದಿ ರೈತರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಏಳು ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು, 15ಕ್ಕೂ ಸಂಶೋಧನಾವಿದ್ಯಾರ್ಥಿಗಳು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಉಪನ್ಯಾಸಕಿ ಡಾ ಸೌಮ್ಯ ಸರಸ್ವತಿ ಅಶೋಕ ಗಿಡದ ಕುರಿತು ಸಮಗ್ರ ಸಂಶೋಧನೆ ನಡೆಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಡಾ ಸುಬ್ರಮಣ್ಯ ಪದ್ಯಾಣ ಪ್ರಸ್ತಾವಿಕ ನುಡಿಗಳನ್ನಾಡಿದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಝೇನಿಕಾ ಡಿಸೋಜಾ ಸ್ವಾಗತಿಸಿ, ಡಾ ಗೀತಾ ಎಂ.ಬಿ ನಿರೂಪಿಸಿ, ಡಾ ಪ್ರಶಾಂತ ಜೈನ್ ವಂದಿಸಿದರು.
