Kundapra.com ಕುಂದಾಪ್ರ ಡಾಟ್ ಕಾಂ

ಹಿರಿಯ ಯಕ್ಷಗಾನ ಕಲಾವಿದ ವಂಡ್ಸೆ ನಾರಾಯಣ ಗಾಣಿಗ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಭಯ ತಿಟ್ಟುಗಳ ಅಪ್ರತಿಮ ಸ್ತ್ರೀ ಪಾತ್ರದಾರಿ ವಂಡ್ಸೆ ನಾರಾಯಣ ಗಾಣಿಗ (84) ಅಲ್ಪಕಾಲದ ಅಸೌಖ್ಯದಿಂದ ವಂಡ್ಸೆಯ ಸ್ವಗೃಹದಲ್ಲಿ ಸೋಮವಾರ ನಿಧನರಾದರು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ತೆಂಕು ತಿಟ್ಟುಗಳಲ್ಲಿ ಮೆರೆದ ಏಕೈಕ ಕಲಾವಿದ ನಾರಾಯಣ ಗಾಣಿಗ 40 ವರ್ಷ ನಿರಂತರ ವೃತ್ತಿ ಕಲಾವಿದರಾಗಿ ಉತ್ತಂಗಕ್ಕೆ ಏರಿದ್ದರು. 12ನೇ ವಯಸ್ಸಿಗೆ ಬಣ್ಣಹಚ್ಚಿದ ಗಾಣಿಗ ಸ್ತ್ರೀ ಪಾತ್ರದ ಮೂಲಕ ಹಲವು ಪಾತ್ರಗಳಿಗೆ ರಂಗದಲ್ಲಿ ಜೀವ ತುಂಬಿದರು. ವಂಡ್ಸೆ ಶೇಷ ಗಾಣಿಗ ಹಾಗೂ ಪಣಿಯಮ್ಮ ಪುತ್ರನಾಗಿ 1937ರಲ್ಲಿ ಜನಿಸಿದ ಗಾಣಿಗರು ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಗಾಣಿಗ ಸಹೋದರ ಮುತ್ತ ಗಾಣಿಗ ಯಕ್ಷಗಾನ ಪ್ರವೇಶಕ್ಕೆ ಪ್ರೇರಣೆ. ಮಾರಣಕಟ್ಟೆ ಮೇಳದಲ್ಲಿ ಕೋಡಂಗಿ ವೇಷ ಮೂಲಕ ರಂಗಸ್ಥಳ ಪ್ರವೇಶಿಸಿದ ಗಾಣಿಗ ಮತ್ತೆ ಹಿಂದಕ್ಕೆ ತಿರುಗಿ ನೋಡಲಿಲ್ಲ. ವೀರಭದ್ರ ನಾಯ್ಕ್ ಮತ್ತು ಮಟ್ಪಾಡಿ ಶ್ರೀನಿವಾಸರಂತಹ ಮೇರು ಕಲಾವಿದರ ಶಿಷ್ಯರಾದ ಗಾಣಿಗರು ಉಭಯತಿಟ್ಟುಗಳ ಪ್ರಸಿದ್ಧ ಸ್ತ್ರೀ ಪಾತ್ರಧಾರಿಯಾಗಿ ರಂಗದಲ್ಲಿ ಮಿಂಚು ಹರಿಸಿ, ಮಟ್ಪಾಡಿ ಶೈಲಿಯಲ್ಲಿ ಪ್ರಸಿದ್ದರಾದರು.

ಭಕ್ತಿ, ಶೃಂಗಾರ, ಕರುಣಾ, ವೀರರಸದಲ್ಲಿ ಗಾಣಿಗರು ಅಭಿನಯಕ್ಕೆ ಸಾಟಿಯಿಲ್ಲ ಎಂಬಂತಾಗಿದ್ದು, ಮೋಹಿನಿ, ಶಿವೆ, ಸುಶೀಲಾ, ರೂಪರೇಖಾ, ಪ್ರಭಾವತಿ ಪಾತ್ರಗಳು ಗಾಣಿಗರ ಉತ್ತಂಗಕ್ಕೆ ಏರಿಸಿತು. ಮಾರಣಕಟ್ಟೆ ಮೇಳದಲ್ಲಿ ಸುದೀರ್ಘ ಕಲಾ ಸೇವೆ ಮಾಡಿದ ಗಾಣಿಗ, ಮಂದಾರ್ತಿ, ಕಮಲಶಿಲೆ, ಕೊಲ್ಲೂರು, ಕೂಡ್ಲು, ಸಾಲಿಗ್ರಾಮ, ಇಡುಗುಂಜಿ, ಧರ್ಮಸ್ಥಳ ಮೇಳಗಳಲ್ಲಿ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿ ತಿರುಗಾಟ ಮಾಡಿದ ಗಾಣಿಗರು ವೇಷಕಳಿಚಿ ಹೊರಟಿದ್ದಾರೆ. ನಾರಾಯಣ ಗಾಣಿಗರಿಗೆ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಮೃತರು ಪತ್ನಿ, ಮೂವರು ಪುತ್ರರು, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Exit mobile version