Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸಮೀಪ ಸಮುದ್ರದಲ್ಲಿ ಬೋಟ್ ಮುಳುಗಡೆ: ಲಕ್ಷಾಂತರ ರೂ. ನಷ್ಟ

ಕುಂದಾಪುರ: ಗಂಗೊಳ್ಳಿ ಬಂದರಿನ ಮೂಲಕ ಭಾನುವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಫಿಶಿಂಗ್ ಬೋಟೊಂದು ಗಂಗೊಳ್ಳಿ ಸಮೀಪ ಸಮುದ್ರದಲ್ಲಿ ದುರಂತಕ್ಕೀಡಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಗಂಗೊಳ್ಳಿಯ ರಾಘವೇಂದ್ರ ಖಾರ್ವಿ ಮಾಲಕತ್ವದ ಶ್ರೀ ಮಂಜುನಾಥೇಶ್ವರ ಹೆಸರಿನ ಮೀನುಗಾರಿಕೆಯ ಬೋಟು ಇಂದು ಬೆಳಿಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಬಂದರಿನಿಂದ ಕೆಲವೇ ದೂರದಲ್ಲಿ ಸಮುದ್ರದಲ್ಲಿ ತೆರಳುತ್ತಿದ್ದ ಸಂದರ್ಭ ಭಾರಿ ಗಾತ್ರದ ಅಲೆಯೊಂದು ಬೋಟಿಗೆ ಅಪ್ಪಳಿಸಿದ ಪರಿಣಾಮ ಬೋಟು ಮಗುಚಿ ಬಿದ್ದಿತು ಎನ್ನಲಾಗಿದೆ. ಇದೇ ಸಂದರ್ಭ ಸಮೀಪದಲ್ಲಿ ಸಾಗುತ್ತಿದ್ದ ಸುಮಾರು ನಾಲ್ಕೈದು ಬೋಟಿನ ಮೀನುಗಾರರು ಮಗುಚಿ ಬಿದ್ದ ಬೋಟಿನಲ್ಲಿದ್ದ ಪಾಂಡು ಗಂಗೊಳ್ಳಿ, ಪ್ರಭಾಕರ ಗಂಗೊಳ್ಳಿ, ಈಶ್ವರ ಉಪ್ಪುಂದ ಹಾಗೂ ಮಂಜುನಾಥ ಕೊರವಡಿ ಎಂಬುವರನ್ನು ರಕ್ಷಿಸಿದ್ದಾರೆ. ಗಾಯಗೊಂಡ ಮೀನುಗಾರರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದುರಂತದಲ್ಲಿ ಬೋಟು ಸಮುದ್ರದಲ್ಲಿ ಮುಳುಗಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಲೆ ಮತ್ತಿತರ ಸಲಕರಣೆಗಳು ಸಮುದ್ರ ಪಾಲಾಗಿದೆ. ಅಪಘಾತದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಘಟನೆಯ ಸುದ್ಧಿ ತಿಳಿಯುತ್ತಿದ್ದಂತೆಯೇ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಸ್ಥಳಕ್ಕೆ ಭೇಟಿ ಮೀನುಗಾರರಲ್ಲಿ ಧೈರ್ಯ ತುಂಬಿ, ಅವಘಡಕ್ಕೀಡಾದ ಬೋಟ್ ಮಾಲೀಕರಿಗೆ ಸಾಂತ್ವನ ಹೇಳಿ ಎದೆಗುಂದದಂತೆ ಮನವಿ ಮಾಡಿದರು. ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

Exit mobile version