Kundapra.com ಕುಂದಾಪ್ರ ಡಾಟ್ ಕಾಂ

ಪಂಚಗಂಗಾವಳಿ ಹಿನ್ನೀರಿನಲ್ಲಿರುವ ಗಂಗೋತ್ರಿ ಕ್ರೂಸ್ ಬೋಟ್‌ನ್ನು ವೀಕ್ಷಿಸಿದ ಸಚಿವ ಎಸ್. ಅಂಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕುಂದಾಪುರ ತಾಲೂಕಿನ ರಮಣೀಯ, ಸುಂದರವಾದ ಪಂಚಗಂಗಾವಳಿ ನದಿಯ ಅದ್ಭುತವಾದ ಹಿನ್ನೀರು. ಈ ಹಿನ್ನೀರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನಿರ್ಮಿಸಲಾಗಿರುವ ಗಂಗೋತ್ರಿ ಕ್ರೂಸ್ ಬೋಟ್‌ನ್ನು ನೋಡಿದಾಗ ಹೊಸ ಜಗತ್ತನ್ನೇ ನೋಡಿದ ಅನುಭವ ಉಂಟಾಗುತ್ತಿದೆ. ಕೇರಳ ರಾಜ್ಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಇಂತಹ ಕ್ರೋಸ್ ಬೋಟ್‌ಗಳು ನಮ್ಮ ರಾಜ್ಯಕ್ಕೆ ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ ಎಂದು ಮೀನುಗಾರಿಕಾ ಮತ್ತು ಬಂದರು ಸಚಿವ ಎಸ್. ಅಂಗಾರ ಹೇಳಿದರು.

ಗುಜ್ಜಾಡಿ ಗ್ರಾಮದ ಮಂಕಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗಂಗೋತ್ರಿ ಕ್ರೂಸ್ ಬೋಟ್‌ನ್ನು ವೀಕ್ಷಿಸಿ ಮಾತನಾಡಿದರು.

ಈ ವಿನೂತನ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಗಂಗೊಳ್ಳಿಯ ಟಿ.ವಾಸುದೇವ ದೇವಾಡಿಗ ಹಾಗೂ ಪಾಲುದಾರರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಅಂಗಾರ, ಈ ಉದ್ಯಮ ಯಶಸ್ವಿಯಾಗಿ ಮುನ್ನಡೆಯಲು ಸರಕಾರದ ಮೂಲಕ ದೊರೆಯುವ ಸೌಲಭ್ಯವನ್ನು ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಕುಂದಾಪುರ ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ತಾಪಂ ಸದಸ್ಯರಾದ ಸುರೇಂದ್ರ ಖಾರ್ವಿ, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಗಂಗೊಳ್ಳಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ನಿರ್ದೇಶಕ ಚಂದ್ರ ಖಾರ್ವಿ, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಎಸ್., ಮಣಿ ಖಾರ್ವಿ, ಅಶೋಕ ಎನ್.ಡಿ., ಅಶೋಕ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಸಚಿವ ಎಸ್. ಅಂಗಾರ ಮತ್ತು ಶಾಸಕ ಸುಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗಂಗೋತ್ರಿ ಕ್ರೂಸ್ ಬೋಟ್‌ನ ಪಾಲುದಾರ ಟಿ. ವಾಸುದೇವ ದೇವಾಡಿಗ ಸ್ವಾಗತಿಸಿದರು.

Exit mobile version