ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬರಹಗಾರ ತನ್ನ ಅನುಭವ ಮತ್ತು ತನ್ನದೇ ವಿಶಿಷ್ಟ ನೋಟದಿಂದ ಪರಿಗ್ರಹಿಸುವ ವಸ್ತುವಿನ ಕುರಿತು ತಾನು ರೂಢಿಸಿಕೊಂಡ ವಿಶಿಷ್ಟ ಭಾಷಾ ಶೈಲಿಯನ್ನು ಬಳಸಿ ರಚಿಸುವ ಕೃತಿ ಸೃಜನಶೀಲ ಸಾಹಿತ್ಯ ಎನಿಸುತ್ತದೆ. ಅದು ಅನುಕರಣೆ ಆಗಿರದೆ ಹೊಸ ಸೃಷ್ಟಿಯಾಗಿರುತ್ತದೆ ಎಂದು ಉಡುಪಿ ಜಿ. ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ರವಿರಾಜ ಶೆಟ್ಟಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆಯ ಪ್ರಸಕ್ತ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಕೃತಿಯ ಆಧಾರ ಮತ್ತು ಅನುಕರಣೆಯಿಂದ ರಚಿಸುವ ಕೃತಿಗಳು ಸೃಜನೇತರ ಸಾಹಿತ್ಯ ವಿಭಾಗಕ್ಕೆ ಸೇರುತ್ತವೆ. ಎರಡೂ ಪ್ರಕಾರಗಳಿಗೆ ಅದರದೇ ಆದ ಮಹತ್ವ ಇದೆ ಎಂದ ಅವರು ಕನ್ನಡದ ವಿವಿಧ ಕೃತಿಗಳನ್ನು ಉದಾಹರಿಸಿ, ಸೃಜನಶೀಲ ಸಾಹಿತ್ಯದ ಸ್ವರೂಪ ಮತ್ತು ವೈಶಿಷ್ಟ್ಯವನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರಘು ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ವೇದಿಕೆಯ ಸಂಚಾಲಕ, ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ನವೀನ್ ಎಚ್. ಜೆ, ಮೀನಾಕ್ಷಿ, ಸತೀಶ್ ಎಂ. ಇದ್ದರು.