ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗ್ರಾಮ ಪಂಚಾಯಿತಿಯು ಅಕ್ರಮ ಕಟ್ಟಡದ ವಿರುದ್ಧ ಕ್ರಮಕೈಗೊಳ್ಳದೆ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಆ ಕಟ್ಟಡವನ್ನು ತೆರವುಗೊಳಿಸುವವರೆಗೆ ನಿರಂತರ ಪ್ರತಿಭಟನೆ ನಡೆಸಲಾಗು ವುದು ಎಂದು ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗ ಮಾತೃ ಸುರಕ್ಷಾ ಪ್ರಮುಖ್ ಗಣರಾಜ ಭಟ್ ಕೆದಿಲ ಹೇಳಿದರು.
ಗಂಗೊಳ್ಳಿಯಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡ ತೆರವಿಗೆ ಒತ್ತಾಯಿಸಿ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕುಂದಾಪುರ ತಹಶೀಲ್ದಾರ್ ಆನಂದಪ್ಪ ನಾಯ್ಕ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಭೇಟಿ ನೀಡಿ ಪ್ರತಿಭಟನೆ ನಿರತರ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ನಡೆಸಿದರು. ಕಾನೂನು ಪ್ರಕಾರ ಅಕ್ರಮ ಕಟ್ಟಡ ತೆರವಿಗೆ ಕ್ರಮಕೈಗೊಳ್ಳಲಾಗುವುದು. ಕಟ್ಟಡ ನಿರ್ಮಿಸುವವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು. ಆದಷ್ಟು ಶೀಘ್ರ ಕಟ್ಟಡದ ತೆರವು ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ತಹಶೀಲ್ದಾರ್ ಆನಂದಪ್ಪ ನಾಯ್ಕ್ ಹೇಳಿದರು.
ಪ್ರತಿಭಟನಕಾರರು ತಕ್ಷಣ ಕಟ್ಟಡ ತೆರವಿಗೆ ಒತ್ತಾಯಿಸುತ್ತಲೇ ಇದ್ದ ಕಾರಣ ಗ್ರಾಮ ಪಂಚಾಯಿತಿ ತುರ್ತು ಸಭೆ ಸೇರಿ, ಕಾನೂನು ಸಲಹೆ ಪಡೆದು ವಿವಾದಿತ ಅಕ್ರಮ ಕಟ್ಟಡವನ್ನು ತೆರವು ಮಾಡುವ ನಿರ್ಣಯ ತೆಗೆದುಕೊಂಡಿತು. ಬೆಳಿಗ್ಗೆ ಆರಂಭವಾದ ಪ್ರತಿಭಟನೆ ಸಂಜೆ ತನಕ ನಡೆಯಿತು. ಪೊಲೀಸ್ ಅಧಿಕಾರಿಗಳಾದ ಸಂತೋಷ ಕಾಯ್ಕಿಣಿ ಮತ್ತು ಭೀಮಾಶಂಕರ ಎಸ್. ಅವರು ಹಿಂಜಾವೇ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತು.
ಹಿಂಜಾವೇ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್ ಕಾರ್ಕಳ, ಜಿಲ್ಲಾ ಕಾರ್ಯದರ್ಶಿ ಶಂಕರ್ ಕೋಟ, ಭೂ ಸುರಕ್ಷಾ ಜಿಲ್ಲಾ ಪ್ರಮುಖ್ ರಮೇಶ್ ಕಲ್ಲೊಟ್ಟೆ, ಜಿಲ್ಲಾ ಉಪಾಧ್ಯಕ್ಷ ವಾಸುದೇವ ಗಂಗೊಳ್ಳಿ, ಯಶವಂತ್ ಖಾರ್ವಿ, ರತ್ನಾಕರ ಗಾಣಿಗ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಜಿಲ್ಲಾ ಪ್ರಚಾರ ಪ್ರಮುಖ್ ಅವಿನಾಶ್ ಶೆಟ್ಟಿ ಬೆಳ್ವೆ ಇದ್ದರು.