ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಬ್ಯಾಂಕುಗಳ ತವರೂರಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹುಟ್ಟಿದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಕರೋನಾ ಸಂಕಷ್ಟದ ಈ ಕಾಲಘಟ್ಟದಲ್ಲಿ ಎನ್‌ಪಿಎ ಹೆಚ್ಚಾಗಿ ಲಾಭಾಂಶ ಕಡಿಮೆಯಾಗುತ್ತಿದೆ. ಗ್ರಾಹಕರು ಕ್ಲಪ್ತ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡಿ, ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕಿನ ಸಾಲ ಸೌಲಭ್ಯದ ಪ್ರಯೋಜವನ್ನು ಪಡೆದುಕೊಳ್ಳಬೇಕು ಎಂದು ಕೆನರಾ ಬ್ಯಾಂಕಿನ ಮಣಿಪಾಲ ವೃತ್ತ ಕಛೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಕೆ.ಕಾಳಿ ಹೇಳಿದರು.
ಅವರು ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆ 1, 2ಮತ್ತು ಕೆನರಾ ಬ್ಯಾಂಕ್ ಗುಜ್ಜಾಡಿ ಶಾಖೆಯ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಗ್ರಾಹಕರ ಸಮಾವೇಶದಲ್ಲಿ ಮಾತನಾಡಿದರು.
ಕೆನರಾ ಬ್ಯಾಂಕ್ ಗಂಗೊಳ್ಳಿ ಮತ್ತು ಗುಜ್ಜಾಡಿ ಶಾಖೆಯಲ್ಲಿ 180 ಕೋಟಿ ರೂ. ವ್ಯವಹಾರ ನಡೆಯುತ್ತಿದ್ದು 120ಕೋಟಿ ಠೇವಣಿ ಹೊಂದಿದೆ. 60ಕೋಟಿ ರೂ. ಸಾಲ ನೀಡಲಾಗಿದ್ದು, ಸುಮಾರು 2800 ಮಂದಿ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಗ್ರಾಹಕರ ಪ್ರೋತ್ಸಾಹ, ಸಹಕಾರದಿಂದ ಕೆನರಾ ಬ್ಯಾಂಕ್ ಸದೃಢವಾಗಿ ಬೆಳೆಯುತ್ತಿದ್ದು, ಸೇವೆಯಲ್ಲೂ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್ ಸಮಾವೇಶ ಉದ್ಘಾಟಿಸಿ ಶುಭ ಹಾರೈಸಿದರು. ಉದ್ಯಮಿ ಜಿ.ಭಾಸ್ಕರ ವಿಠಲ ಶೆಣೈ ಶುಭಾಶಂಸನೆಗೈದರು. ಈ ಸಂದರ್ಭ ಅರ್ಹರಿಗೆ ಸಾಲ ಮಂಜೂರಾತಿ ಪತ್ರ ಹಸ್ತಾಂತರಿಸಲಾಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ಎಲ್‌ಇಡಿ ದಾರಿದೀಪ ಮತ್ತು ಗಂಗೊಳ್ಳಿ ಸ.ವಿ.ಪದವಿಪೂರ್ವ ಕಾಲೇಜಿಗೆ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು. ಗ್ರಾಹಕರು ಸಲಹೆ ಸೂಚನೆ ನೀಡಿದರು. ಬ್ಯಾಂಕಿನ ಡಿವಿಜನಲ್ ಮ್ಯಾನೇಜರ್ ರಾಜುಕರ್, ಕುಂದಾಪುರದ ಡಿವಿಜನಲ್ ಮ್ಯಾನೇಜರ್ ರತ್ನಾಕರ ಗಾಣಿಗ, ಶಾಖಾ ಪ್ರಬಂಧಕರಾದ ವಿಷ್ಣುಮೂರ್ತಿ ಟಿ.ಎಸ್., ಅರ್ಜುನ್ ವಿ. ಉಪಸ್ಥಿತರಿದ್ದರು. ಗಂಗೊಳ್ಳಿ ಶಾಖಾ ಪ್ರಬಂಧಕ ವಿಷ್ಣುಮೂರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.