Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಫೆ.27ರಿಂದ ಲಾವಣ್ಯ ರಂಗ ವೈವಿಧ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಲ್ಕು ದಶಕ ಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲ ವಾಗಿರುವ ಲಾವಣ್ಯದ 44ನೇ ವಾರ್ಷಿಕೋತ್ಸವ ಮತ್ತು ರಂಗ ವೈವಿಧ್ಯ-2021 ಇದೇ 27ರಿಂದ ಮಾರ್ಚ್ 3ರ ವರೆಗೆ ಇಲ್ಲಿನ ಶಾರದಾ ವೇದಿಕೆಯಲ್ಲಿ ನಡೆಯಲಿದೆಎಂದು ಸಂಸ್ಥೆಯ ಅಧ್ಯಕ್ಷ ಎಚ್. ಉದಯ ಆಚಾರ್ ತಿಳಿಸಿದರು.

ಬೈಂದೂರು ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು. 27ರ ಸಂಜೆ 7.30ಕ್ಕೆ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಸಮಾರಂಭ ಉದ್ಘಾಟಿಸುವರು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅತಿಥಿಗಳಾಗಿರುವರು. ಸಿ. ಎನ್. ಅಶ್ವಥ್ ಅವರ ‘ಕೃಷ್ಣ ಸಂಧಾನ’ ನಾಟಕವನ್ನು ಲಾವಣ್ಯ ಕಲಾವಿದರು ಪ್ರಸ್ತುತಪಡಿಸುವರು.

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯು. ಶ್ರೀನಿವಾಸ ಪ್ರಭು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀಪತಿ ಹೆಗಡೆ ಹಕ್ಲಾಡಿ ಮತ್ತು ಉದಯ ಪಡಿಯಾರ್ ಅವರನ್ನು ಸನ್ಮಾನಿಸಲಾಗುವುದು ಎಂದರು.

28ರಂದು ‘ನೃತ್ಯ ನಿಕೇತನ ಕೊಡವೂರು‘ ತಂಡದಿಂದ ಸುಧಾ ಆಡುಕಳ ಅವರ ‘ನಾರಸಿಂಹ’ನೃತ್ಯ ನಾಟಕ, ಮಾರ್ಚ್ 1ರಂದು ಶಿವಮೊಗ್ಗದ ‘ರಂಗಾಯಣ‘ ತಂಡದಿಂದ ಎಸ್. ಮಾಲತಿ ಅವರ ರಂಗರೂಪ ಆಧಾರಿತ ‘ಹಕ್ಕಿ ಕಥೆ’2ರಂದು ಅದೇ ಕಲಾವಿದರಿಂದ ಕೆ. ವಿ. ಸುಬ್ಬಣ್ಣ ರಚಿಸಿರುವ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ಉದಯ ಆಚಾರ್ ತಿಳಿಸಿದರು.

ಮಾರ್ಚ್ 3ರಂದು ರಾಜ್ಯ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದ್ದು, ‘ಜಾನಪದ ವೈಭವ’ ಪ್ರದರ್ಶನಗೊಳ್ಳುವುದು. ಪ್ರತಿದಿನದ ಸನ್ಮಾನ ಕಾರ್ಯಕ್ರಮದಲ್ಲಿ ಸ್ಥಳೀಯ ಪೌರ ಕಾರ್ಮಿಕರು, ಶಿಕ್ಷಕ ಕೇಶ ಎಲ್ಲಂಗಳ, ರಂಗ ನಿರ್ದೇಶಕ ವಿಶ್ವನಾಥ ಆಚಾರ್ಯ ಉಪ್ಪುಂದ, ನಿವೃತ್ತ ಯೋಧ, ಬರಹಗಾರ ಚಂದ್ರಶೇಖರ ನಾವಡ ಇವರನ್ನು ಸನ್ಮಾನಿಸಲಾಗುವುದು ಎಂದು ಉದಯ ಆಚಾರ್ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಮೂರ್ತಿ ಡಿ. ಬೈಂದೂರು, ವ್ಯವಸ್ಥಾಪಕ ಗಣಪತಿ ಎಸ್. ಇದ್ದರು.

Exit mobile version