Kundapra.com ಕುಂದಾಪ್ರ ಡಾಟ್ ಕಾಂ

ಅಶ್ವತ್ಥ ವೃಕ್ಷಕ್ಕೆ ಭಾರತೀಯ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ: ಡಾ. ಕೆ. ರಾಮಚಂದ್ರ ಅಡಿಗ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಶ್ವತ್ಥ ವೃಕ್ಷಕ್ಕೆ ಭಾರತೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಅದರ ಮೂಲದಲ್ಲಿ ಬ್ರಹ್ಮ, ನಡುವೆ ವಿಷ್ಣು ಮತ್ತು ಮೇಲ್ಭಾಗದಲ್ಲಿ ಶಿವ ವಾಸಿಸುತ್ತಾರೆ ಎಂಬ ನಂಬಿಕೆ ಇರುವುದರಿಂದ ಅದರ ಬಗ್ಗೆ ಪೂಜ್ಯ ಭಾವನೆ ಹೊಂದಿ ಆರಾಧಿಸಲಾಗುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ಹೇಳಿದರು.

ಅವರು ಖಂಬದಕೋಣೆ ಹಳಗೇರಿಯ ಕೋಟಿ ವೀರಾಂಜನೇಯ ದೇವಸ್ಥಾನದ ಮುಂದಿನ ಅಶ್ವತ್ಥ ವೃಕ್ಷದ ಪ್ರತಿಷ್ಠೋಪನಯನ ವಿವಾಹ ಮಹೋತ್ಸದ ನಿಮಿತ್ತ ನಡೆದ ಧಾರ್ಮಿಕಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧ ಪುರಾಣಗಳಲ್ಲಿ ಅಶ್ವತ್ಥ ವೃಕ್ಷದ ಹಿನ್ನೆಲೆ, ಮಹಿಮೆಯ ಉಲ್ಲೇಖ ಇದೆ. ಅದು ಪರಿಸರವನ್ನು ಪೋಷಿಸುವುದರ ಜತೆಗೆ ಜನರ ಆರೋಗ್ಯ ವೃದ್ಧಿಸುತ್ತದೆ ಎಂದು ಈಗ ವೈಜ್ಞಾನಿಕವಾಗಿ ಸಿದ್ಧವಾಗಿದೆ ಎಂದು ಹೇಳಿದರು.

ಕೋವಿಡ್ ವಾರಿಯರ್ ಆಗಿ ಕೆಲಸಮಾಡಿದ ಬೈಂದೂರು ಎಸ್‌ಐ ಸಂಗೀತಾ, ಹಳಗೇರಿ ಕೊಕ್ಕೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಕಾರಂತ, ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಅಡಿಗ ನೂಜಾಡಿ, ಕೋಟಿ ವೀರಾಂಜನೇಯ ದೇವಸ್ಥಾನದ ಪ್ರಧಾನ ಅರ್ಚಕ ಪ್ರದ್ಯುಮ್ನ ಹೆಬ್ಬಾರ್, ಹಳಗೇರಿ ಶ್ರೀ ಬಸವೇಶ್ವರ ಭಜನಾ ಮಂದಿರದ ಚಂದ್ರ ಬಿ. ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ಉಪ್ಪುಂದ ಜೇಸಿಐ ಸ್ಥಾಪಕಾಧ್ಯಕ್ಷ ದಿವಾಕರ ಶೆಟ್ಟಿ, ಟಿ. ಎಸ್. ನಾಗೇಶ ಜೋಗಿ, ವಿಜಯಕುಮಾರ ಶೆಟ್ಟಿ ಇದ್ದರು. ಅಶ್ವತ್ಥಕಟ್ಟೆ ಪ್ರತಿಷ್ಠಾ ಸಮಿತಿಯ ಅಧ್ಯಕ್ಷ ನರಸಿಂಹ ಹಳಗೇರಿ ಸ್ವಾಗತಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು.

Exit mobile version