Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ಕೇಂದ್ರ ಬಜೆಟ್ ವಿಶ್ಲೇಷಣೆ – ಪ್ಯಾನೆಲ್ ಡಿಸ್ಕಶನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಆಳ್ವಾಸ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ವತಿಯಿಂದ ಕೇಂದ್ರ ಬಜೆಟ್- 2021ರ ಕುರಿತು ಪ್ಯಾನೆಲ್ ಡಿಸ್ಕಶನ್ ನಡೆಯಿತು. ಕಂದಾಯ, ಉದ್ಯಮ, ಕೃಷಿ, ಇನ್‌ಫ್ರಾಸ್ಟ್ರಕ್ಚರ್, ಬ್ಯಾಂಕಿಂಗ್, ಟೂರಿಸಮ್, ರಕ್ಷಣಾ ಕ್ಷೇತ್ರಗಳನ್ನು ಪ್ರತಿನಿಧಿಸಿ ವಿವಿಧ ಕ್ಷೇತ್ರತಜ್ಞರು ತಮ್ಮ ವಾದಗಳನ್ನು ಮಂಡಿಸಿದರು.

ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಭಾರತೀಯ ಕಂದಾಯ ಇಲಾಖೆಯ ಮಾಜಿ ಅಧಿಕಾರಿ ಜಯಪ್ರಕಾಶ್ ರಾವ್, ಯಾವುದೇ ಬಜೆಟ್ ಆಗಲಿ, ಸರಕಾರವಾಗಲಿ ಆರ್ಥಿಕತೆಯ ಮೇಲೆ ಜನಸಂಖ್ಯಾ ಸ್ಫೋಟದ ಪರಿಣಾಮದ ಕುರಿತು ವಿಶ್ಲೇಷಿಸಿಲ್ಲ. ಇಲ್ಲಿಯವರೆಗೂ ಬಂದ ಯಾವುದೇ ಬಜೆಟ್‌ನಲ್ಲಿ ದೇಶದ ಪ್ರಜೆಯ ಆತ್ಮಾಭಿಮಾನದ ಕುರಿತು ಪ್ರಸ್ತಾಪವಿಲ್ಲ. ನಾವು ಜಿಡಿಪಿ, ತಲಾ ಆದಾಯದ ಹೆಚ್ಚಳದ ಕುರಿತು ಮಾತಾಡುತ್ತೇವೆಯೇ ಹೊರತು, ಪ್ರತಿಯೊಬ್ಬ ವ್ಯಕ್ತಿಗೆ ದೊರಕಬಹುದಾದ ಸಂಪನ್ಮೂಲಗಳ ಬಗ್ಗೆ ಯೋಚಿಸುವುದಿಲ್ಲ. ನಮ್ಮಲ್ಲಿ ಎಷ್ಟೋ ಹುಡುಗಿಯರು 14 ವರ್ಷದ ಬಳಿಕ ಶಾಲೆಗೆ ಹೋಗುವುದನ್ನು ಇಂದಿಗೂ ನಿಲ್ಲಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಅಲ್ಲಿರುವ ಮೂಲ ಸೌಕರ‍್ಯಗಳು, ಸಂಪನ್ಮೂಲಗಳ ಕೊರತೆ. ಬುಲೆಟ್ ಟ್ರೇನ್‌ಗಳ ಅಭಿವೃದ್ಧಿಗೂ ಮೊದಲು ನಮ್ಮ ದೇಶದ ಜನತೆಗೆ ಮೂಲಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ಒಂದು ಬಜೆಟ್ ಒಳಗೊಂಡಿರಬೇಕು ಎಂದರು. ಆತ್ಮನಿರ್ಭರ್‌ದಂತಹ ಒಳ್ಳೆಯ ಯೋಜನೆಯನ್ನು ಮೊದಲೇ ಅನುಷ್ಠಾನಗೊಳಿಸಬಹುದಿತ್ತು. ಆದರೆ ಕೊವಿಡ್‌ನಂತಹ ಮಹಾಮಾರಿ ಬಂದ ನಂತರ ಸರಕಾರ ಈ ವಿಷಯದಲ್ಲಿ ಎಚ್ಚೆತ್ತುಕೊಂಡು ಈ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ದುರದೃಷ್ಟಕರ ಎಂದರು.

ಕೃಷಿ ಕ್ಷೇತ್ರವನ್ನು ಪ್ರತಿನಿಧಿಸಿದ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀಧರ್ ಭಿಡೆ, ‘ಈ ಬಾರಿಯ ಬಜೆಟ್ ಕೃಷಿಕನನ್ನು ಮತ್ತು ದೊಡ್ಡ ಸಾಲಗಾರರನನ್ನಾಗಿಸಲು ಹೊರಟಿದೆ. ಕೃಷಿಕನಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಬಜೆಟ್ ಮಾಡಬಹುದಾಗಿತ್ತು. ಜೊತೆಗೆ ಯುವಕರನ್ನು ಕೃಷಿಯತ್ತ ಸೆಳೆಯುವ ಆಕರ್ಷಕ ಯೋಜನೆಗಳನ್ನು ರೂಪಿಸಬಹುದಿತ್ತು. ಆದರೆ ಸಾಲದ ಪ್ರಮಾಣವನ್ನು ಹೆಚ್ಚಿಸುವ ಮೂಲಕ, ಸಬ್ಸಿಡಿಗಳನ್ನು ಹೆಚ್ಚಿಸುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಲಾಗಿದೆ. ರಬ್ಬರ್, ಕಾಫಿ, ಮೆಣಸು ಸೇರಿದಂತೆ ಪ್ಲಾಂಟೇಶನ್ ಬೆಳೆಗಳಿಗೆ ಯಾವುದೇ ಮಹತ್ವ ನೀಡಲಾಗಿಲ್ಲ’ ಎಂದು ವಿಶ್ಲೇಷಿಸಿದರು.

ಕೃಷಿ ಕ್ಷೇತ್ರವನ್ನು ಪ್ರತಿನಿಧಿಸಿದ ಮತ್ತೋರ್ವ ತಜ್ಞರಾದ ವಿಶ್ವೇಶ್ವರ ಭಟ್ ಕೇಂದ್ರ ಬಜೆಟ್‌ನಲ್ಲಿ ಕೃಷಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎಂಬ ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ‘ಪ್ರಸ್ತುತ ಕುಸಿದು ಹೋಗಿರುವ ಆರ್ಥಿಕತೆಗೆ ಯಾರೂ ಕಾರಣರಲ್ಲ. ಅದನ್ನು ಕೇವಲ ಬಜೆಟ್‌ನಿಂದ ಸರಿಪಡಿಸಲಾಗುವುದೂ ಇಲ್ಲ. ಕೋವಿಡ್‌ನಿಂದಾಗಿ ದೇಶದ ಜನರ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದ್ದು, ಬೇಡಿಕೆಯ ಕೊರತೆ ಹೆಚ್ಚಿದೆ. ಇದನ್ನು ಸರಿಪಡಿಸಲು ಪ್ರಸ್ತುತ ಬಜೆಟ್ ಪ್ರಯತ್ನಿಸಿದೆ. ವಿವಿಧ ಸಬ್ಸಿಡಿಗಳು, ಯೋಜನೆಗಳ ಮೂಲಕ ಜನರ ಅರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ, ಬೇಡಿಕೆಯನ್ನು ಮರುಸೃಷ್ಟಿಸುವ ಹಾದಿಗಳನ್ನು ಹುಡುಕಿದೆ’ ಎಂದು ಹೇಳಿದರು.

ಆರ್ಥಿಕ ಕ್ಷೇತ್ರವನ್ನು ಪ್ರತಿನಿಧಿಸಿದ ಚಾರ್ಟರ್ಡ್ ಅಕೌಂಟಂಟ್ ನಿತಿನ್ ಜೆ. ಶೆಟ್ಟಿ, ‘ಪ್ರತೀ ಬಜೆಟ್ ಬಂದಾಗಲೂ ಕೇಂದ್ರ ಸರಕಾರ ಒಂದು ಹೊಸ ಸೆಸ್ ಜಾರಿಗೊಳಿಸುತ್ತದೆ. ಆದರೆ ಕೋವಿಡ್‌ನಂತಹ ಮಹಾಮಾರಿಯ ಸಂದರ್ಭದಲ್ಲಿ ಕೋವಿಡ್ ಸೆಸ್ ಜಾರಿ ಮಾಡದಿರುವುದು ಈ ಬಜೆಟ್‌ನ ಉತ್ತಮ ಅಂಶ. ಈ ಬಾರಿ ನ್ಯಾಶನಲ್ ಟ್ರಾನ್ಸ್‌ಲೇಶನ್ ಪಾಲಿಸಿಯನ್ನು ತಂದಿದೆ. ಇದು ಎಷ್ಟೋ ಕೆಲಸಗಳನ್ನು ಸುಗಮಗೊಳಿಸಿದೆ. ಈ ಬಾರಿಯ ಬಜೆಟ್ ಉತ್ತಮ ಅಂಶಗಳನ್ನು ಒಳಗೊಂಡಿದೆ. ಆದರೆ ಅದನ್ನು ಅಳವಡಿಸುವ ಸಂದರ್ಭದಲ್ಲಿ ನಮ್ಮ ಆಡಳಿತ ವರ್ಗ ಸೋಲುತ್ತದೆ’ ಎಂದು ತಿಳಿಸಿದರು.

ರಕ್ಷಣಾ ಕ್ಷೇತ್ರವನ್ನು ಪ್ರತಿನಿಧಿಸಿದ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ಅಸಿಸ್ಟಂಟ್ ಫ್ರೊಫೆಸರ್ ಡಾ.ಪನೀರ್‌ಸೆಲ್ವಂ ಪ್ರಕಾಶ್, ‘ಸ್ವದೇಶಿ ನಿರ್ಮಿತ ತಂತ್ರಜ್ಞಾನದ ಬಳಕೆ ಯಾವಾಗಲೂ ಒಳ್ಳೆಯದು. ರಕ್ಷಣಾ ತಂತ್ರಜ್ಞಾನಕ್ಕಾಗಿ ಇನ್ನೊಂದು ದೇಶದ ಮೇಲೆ ಅವಲಂಬಿತವಾಗಬಾರದು. ಸ್ಟ್ರ್ಯಾಟಜಿಕ್ ಕಲ್ಚರ್ ನಮ್ಮಲ್ಲಿ ಬೆಳೆಯಬೇಕು’ ಎಂದರು.

ಉದ್ಯಮಿ ಕೃಷ್ಣಭಟ್, ಡಾ.ಡಿ.ಬಿ.ಮೆಹ್ತಾ, ಲಾಲ್ ಗೋಯೆಲ್ ಕ್ರಮವಾಗಿ ಉದ್ಯಮ, ಇನ್‌ಫ್ರಾಸ್ಟ್ರಕ್ಚರ್ ಹಾಗೂ ಟೂರಿಸಮ್ ಕ್ಷೇತ್ರಗಳನ್ನು ಪ್ರತಿನಿಧಿಸಿ ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ವಿ.ಜೋಶಿ ಇಡೀ ಚರ್ಚೆಯನ್ನು ನಿರ್ವಹಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಬಜೆಟ್ ಕುರಿತು ಮಧ್ಯಾಹ್ನ ವಿದ್ಯಾರ್ಥಿಗಳ ಪ್ಯಾನೆಲ್ ಡಿಸ್ಕಶನ್ ನಡೆಯಿತು. ಎಂಬಿಎ, ಎಂಕಾಂ, ಬಿಕಾಂ ಪ್ರೊಫೆಶನಲ್ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ಚರ್ಚೆಯಲ್ಲಿ ಭಾಗಿಯಾಗಿದ್ದರು. ಪತ್ರಿಕೋದ್ಯಮ ವಿಭಾಗದ ಅಭಿಷೇಕ್ ಎಸ್. ಆರೋಗ್ಯ ಕ್ಷೇತ್ರ, ರಮ್ಯಾ ಶಿಕ್ಷಣ ಕ್ಷೇತ್ರ, ಕಾಮರ್ಸ್ ಪ್ರೊಫೆಶನಲ್ ವಿಭಾಗದ ರೋಹಿತ್ ಮೂಲಸೌಕರ‍್ಯ ಅಭಿವೃದ್ಧಿ ಇಲಾಖೆ, ಈಶ್ವರ್ ಸಾರಿಗೆ ಇಲಾಖೆ, ಎಂಕಾಂ ವಿಭಾಗದ ಸುಹಾಸ್ ಶೆಟ್ಟಿ ಟ್ಯಾಕ್ಸೇಶನ್, ಸ್ವರ್ಣಗೌರಿ ಶೆಣೈ ಬ್ಯಾಂಕಿಂಗ್, ದೀಪಕ್ ಕೃಷಿ, ಅಂಕಿತಾ ಉದ್ಯಮಶೀಲತೆ, ಕಕ್ಷಿ ಉದ್ಯಮ ಕ್ಷೇತ್ರವನ್ನು ಪ್ರತಿನಿಧಿಸಿ ಮಾತನಾಡಿದರು. ನಿವೃತ್ತ ಐಆರ್‌ಎಸ್ ಅಧಿಕಾರಿ ಜಯಪ್ರಕಾಶ್ ರಾವ್ ವಿದ್ಯಾರ್ಥಿ ಪ್ಯಾನೆಲ್ ಡಿಸ್ಕಶನ್‌ನ ನಿರ್ವಹಿಸಿದರು.

ಪ್ಯಾನೆಲ್‌ಡಿಸ್ಕಶನ್ ಬಳಿಕ ನಡೆದ ಸಂವಾದ ಕಾರ‍್ಯಕ್ರಮದಲ್ಲಿ ಹೆಲಿಕಾಪ್ಟರ್ ಮನಿ, ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಸಾಧ್ಯತೆಗಳು, ನೂತನ ಯೋಜನೆಗಳ ಜಾರಿ ಪ್ರಕ್ರಿಯೆ, ಖಾಸಗೀಕರಣ, ರೈತ ಪ್ರತಿಭಟನೆ, ನೂತನ ಕೃಷಿ ಮಸೂದೆಗಳ ಕುರಿತ ವಿದ್ಯಾರ್ಥಿಗಳ ಪ್ರಶ್ನೆಗೆ ತಜ್ಞರು ಉತ್ತರಿಸಿದರು.

Exit mobile version