Kundapra.com ಕುಂದಾಪ್ರ ಡಾಟ್ ಕಾಂ

ಕಾಂಗ್ರೆಸ್ ಪಕ್ಷ ಹುಟ್ಟಿದ್ದೇ ಜನರ ಧ್ವನಿಯಾಗಲು: ಡಿ. ಕೆ. ಶಿವಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚುನಾವಣೆಗೆ ಇನ್ನೂ ಕಾಲಾವಕಾಶ ಇರುವುದರಿಂದ ಇವತ್ತಿನಿಂದಲೇ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಜತೆಗೂಡಿ ಯೋಚಿಸಿ ಜಿಲ್ಲೆಯ ಮತದಾರರ ಭಾವನೆ ಅರಿತು ಕೆಲಸ ಮಾಡಿದರೆ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಐದರಲ್ಲಾದರೂ ಪಕ್ಷದ ಶಾಸಕರು ಆಯ್ಕೆಯಾಗುತ್ತಾರೆಂಬ ಆತ್ಮವಿಶ್ವಾಸ ನನಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ ನೀತಿಯನ್ನು ವಿರೋಧಿಸಿ ಸೋಮವಾರ ಹೆಜಮಾಡಿಯಲ್ಲಿ ಆರಂಭವಾದ ಕಾಂಗ್ರೆಸ್ ಪಕ್ಷದ ಜನಧ್ವನಿ ಪಾದಯಾತ್ರೆ, ಬೈಂದೂರು ನೂತನ ಬಸ್‍ನಿಲ್ದಾಣದ ಬಳಿ ಶನಿವಾರ ನಡೆದ ಸಮಾರೋಪದಲ್ಲಿ ಅವರು ಮಾತನಾಡಿದರು. ಇಲ್ಲಿ ನಾನು ಭಾಷಣ ಮಾಡುವುದಕ್ಕಾಗಲಿ ಸನ್ಮಾನ ಮಾಡಿಸಿಕೊಳ್ಳಲಿಕ್ಕಾಗಲಿ ಬಂದಿಲ್ಲ. ಉಡುಪಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು, ಸಚಿವರು ಇದ್ದಾರೆ. ಆದರೆ ಅವರ್ಯಾರೂ ಜನರ ಪರವಾದ ಧ್ವನಿಯಾಗಿಲ್ಲ. ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರ ನಡೆಸುವ ಉದ್ದೇಶದಿಂದ ಹುಟ್ಟಿಕೊಂಡಿಲ್ಲ, ಜನರ ಬದುಕಿನಲ್ಲಿ ಅವರ ಕಷ್ಟಗಳಿಗೆ ಸ್ಪಂದಿಸಿ ಜನರ ಧ್ವನಿಯಾಗಲು ನಮ್ಮ ಪಕ್ಷ ಹಾಗೂ ನಮ್ಮ ಕರ್ತವ್ಯದಂತೆ ಜನರೊಂದಿಗೆ ಬೆರೆತು ಕೆಲಸ ಮಾಡಬೇಕು ಎಂಬ ನೆಲೆಯಲ್ಲಿ ಜನಧ್ವನಿ ಪಾದಯಾತ್ರೆ ಆಯೋಜಿಸಲಾಗಿದೆÉ. ಮುಂದಿನ ದಿನಗಳಲ್ಲಿ ರಾಜ್ಯದ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಾಯಾತ್ರೆ ನಡೆಸಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದರು.

ಜನರಿಗೆ ಆರ್ಥಿಕ ಶಕ್ತಿ ನೀಡುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬ್ಯಾಂಕುಗಳ ರಾಷ್ಟ್ರೀಕರಣಗೊಳಿಸಿದರು, ಆದರೆ ಮೋದಿ ಸರ್ಕಾರ ಕರಾವಳಿಯ ನಾಲ್ಕು ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸಮಾಡಿದ್ದಾರೆ ಎಂದ ಅವರು ಈ ಬಗ್ಗೆ ಧ್ವನಿ ಎತ್ತಬೇಕಾದ ಕರಾವಳಿ ಭಾಗದ ಸಂಸದರಾದ ಸದಾನಂದ ಗೌಡ, ಶೋಭಾ ಕರಂದ್ಲಾಜೆ, ನಳೀನ್‍ಕುಮಾರ ಕಟೀಲ್, ಬಿ. ವೈ. ರಾಘವೇಂದ್ರ ಎಲ್ಲಿಗೆ ಹೋಗಿದ್ದೀರಿ ಎಂದು ಎಂದು ಕಿಡಿಕಾರಿದರು.

ಮನೆಯಲ್ಲಿ ವಾಸ ಮಾಡುವವರು ನಾಲ್ಕಾರು ಮಂದಿಯಾದರೂ ಈ ಕಟ್ಟಡ ನೀರ್ಮಾಣಕ್ಕೆ ನೂರಾರು ಕಾರ್ಮಿಕರ ಬೆವರ ಹನಿಯಿದೆ. ಇದನ್ನು ಒಡೆದು ಹಾಕಲು ಕೇವಲ ಒಂದು ಜೆಸಿಬಿ ಇದ್ದರೆ ಸಾಕು. ಈ ಜೆಸಿಬಿ ಕೆಲಸವನ್ನು ಜಿಲ್ಲೆಯ ಶಾಸಕರು, ಸಂಸದರು, ಸಚಿವರು ಸೇರಿಕೊಂಡು ಮಾಡಿದ್ದಾರೆ ಎಂದು ಆರೋಪಿಸಿದ ಡಿಕೆಶಿ, ದೇಶಕ್ಕೆ ಆರ್ಥಿಕ ಶಕ್ತಿ ಕೊಟ್ಟಂತಹ ಈ ಜಿಲ್ಲೆಗಳ ಬ್ಯಾಂಕುಗಳನ್ನು ವಿಲೀನ ಮಾಡುವಾಗ ತುಟಿಬಿಚ್ಚದೇ ಸುಮ್ಮನಿದ್ದು ಸಮಾಧಿ ಮಾಡಿದಿರಲ್ಲ ಎಂದು ವ್ಯಂಗವಾಡಿದರು.

ನಾನು ಕನಕಪುರದ ಬಂಡೆಯಲ್ಲ. ಬಂಡೆ ಒಂದು ಪ್ರಕೃತಿ, ಅದನ್ನು ಕಡೆದರೆ ಆಕೃತಿ, ಅದನ್ನು ಪೂಜಿಸಿದರೆ ಸಂಸ್ಕøತಿ. ಎಂದ ಅವರು, ಕೊರೋನಾ ಲಾಕ್‍ಡೌನ್ ಬಳಿಕ ದೇಶದ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಆಹಾರ ಪ್ರದಾರ್ಥಗಳ ಬೆಲೆ ಏರಿಕೆ, ಪೆಟ್ರೋಲಿಯಂ ಉತ್ವನ್ನಗಳ ದರ ಹೆಚ್ಚಳ, ಗ್ಯಾಸ್ ಸಬ್ಸಿಡಿ ಸ್ಥಗಿತ, ಕೃಷಿ ಕಾಯಿದೆ ತಿದ್ದುಪಡಿ ಮೂಲಕ ಜನವಿರೋಧಿ ನೀತಿಗಳನ್ನು ಜಾರಿಗೆ ತಂದು ಜನರಿಗೆ ನಿತ್ಯ ಕಿರುಕುಳ ನೀಡುವ ಇಂತಹ ಬಿಜೆಪಿ ಸರ್ಕಾರ ಯಾಕೆ ಬೇಕು ಎಂದು ಪ್ರಶ್ನಿಸಿದರು. ಬಿಜೆಪಿಯ ಮಿತ್ರರು ನಾವೆಲ್ಲ ಹಿಂದು ನಾವೆಲ್ಲ ಮುಂದು ಎಂಬ ಘೋಷವಾಕ್ಯದಡಿ ಭಾವನಾತ್ಮಕವಾಗಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಸಿದ್ಧಂತದಲ್ಲಿ ಯಾವುದೇ ಜಾತಿ, ಮತ ಎಣಿಸದೇ ಪರಸ್ಪರ ಭೇದ ಭಾವ ಮಾಡದೇ ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಸೌಹಾರ್ದತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಅಧ್ಯಕ್ಷತೆವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು ಸ್ವಾಗತಿಸಿ ಪ್ರಾಸ್ತಾವಿಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮುಖಂಡರಾದ ಎಂ.ಎ. ಗಫೂರ್, ಗೌರಿ ದೇವಾಡಿಗ, ಎಸ್. ಮದನಕುಮಾರ್, ಸಚಿನ್ ಮೇಘ್, ಹರೀಶ್‍ಕುಮರ್, ಮಿಥುನ್ ರೈ, ಯು. ಬಿ. ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ನಿರೂಪಿಸಿ ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ ವಂದಿಸಿದರು.

ಶನಿವಾರ ಬೆಳಿಗ್ಗೆ ನಾವುಂದದಿಂದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ನೇತೃತ್ವದಲ್ಲಿ ಹೊರಟ ಯಾತ್ರೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ದಾರಿಯುದ್ದಕ್ಕೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಮತ್ತು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಘೋಷಣೆ ಕೂಗಿದರು.

Exit mobile version