Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಮಹಿಳಾ ಠಾಣೆ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

ಕುಂದಾಪುರ: ಇಲ್ಲಿನ ಮಹಿಳಾ ಪೊಲೀಸ್ ರಾಣೆಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿ ತಾಲೂಕಿನ ಮಹಿಳಾ ಮಿತ್ರ ಹಾಗೂ ಮಕ್ಕಳ ಮಿತ್ರದ ಪ್ರತಿನಿಧಿಗಳು ಹಾಗೂ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟದ ಸದಸ್ಯರು ಕುಂದಾಪುರ ವಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಮಿತ್ರ ಕಾರ್ಯಕರ್ತ ಹಾಗೂ ಬೀಜಾಡಿ ಗ್ರಾ.ಪಂ ಸದಸ್ಯ ರವೀಂದ್ರ ದೊಡ್ಮನೆ ಮಾತನಾಡಿ ಕುಂದಾಪುರದಲ್ಲಿ ಮಹಿಳಾ ಠಾಣೆ ಇರುವುದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗಿದೆ. ತಾಲೂಕು ಕೇಂದ್ರದಲ್ಲಿಯೇ ಠಾಣೆ ಇರುವಾಗ ಮಹಿಳೆಯರು ದೂರನ್ನು ನೀಡಲು ಹಿಂಜರಿಯುತ್ತಾರೆ. ಹೀಗಿರುವಾಗ ಜಿಲ್ಲಾ ಕೇಂದ್ರಕ್ಕೆ ಠಾಣೆಯನ್ನು ಸ್ಥಳಾಂತರಿಸುವುದು ಸರಿಯಲ್ಲ. ವರ್ಗವಣೆಯ ಹುನ್ನಾರ ಮುಂದುವರಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಗೊಳಿಹೊಳೆ ಗ್ರಾಮದ ಮಕ್ಕಳ ಮತ್ತು ಮಹಿಳಾ ಮಿತ್ರ ದೇವಿ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ಶೋಷಣೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಠಾಣೆಯನ್ನು ವರ್ಗಾಯಿಸುವುದು ಸಮಂಜಸವಲ್ಲ. ಬದಲಿಗೆ ಗಾಮಾಂತರ ಪ್ರದೇಶದಲ್ಲಿ ಮಹಿಳಾ ಠಾಣೆಯನ್ನು ಆರಂಭಿಸಿ ಅವರಿಗೆ ನೈತಿಕ ಸ್ಥೈರ್ಯ ತುಂಬುವಂತಾಗಬೇಕು ಎಂದರು.

ಕುಂದಾಪುರದ ಶಾಸ್ತ್ರೀ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಮಕ್ಕಳ ಮಿತ್ರ ಮತ್ತು ಮಹಿಳಾ ಮಿತ್ರ ಸದಸ್ಯರು ಕುಂದಾಪುರ ವಿಭಾಗದ ಪೊಲೀಸ್ ಉಪಅಧೀಕ್ಷಕರಿಗೆ ಮನವಿ ಸಲ್ಲಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಮಿನಿ ವಿಧಾನಸೌಧವನ್ನು ತಲುಪಿದರು.

ಬಳಿಕ ಕುಂದಾಪುರ ಸಹಾಯಕ ಕಮೀಷನರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲಾ ಪಂಚಾಯತಿಗಳ ಮಹಿಳಾ ಮತ್ತು ಮಕ್ಕಳ ಮಿತ್ರದ ಸದಸ್ಯರುಗಳು ಹಾಜರಿದ್ದರು.

20150818_113451

Exit mobile version