ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬೈಂದೂರು ಪಟ್ಟಣ ಪಂಚಾಯತ್ ಗೆಜೆಟ್ ನೋಟಿಫಿಕೇಶನ್ ಆಗಿ ಆರು ತಿಂಗಳು ಕಳೆದಿದೆ. ಇದುವರೆಗೂ ನೂತನ ಪಟ್ಟಣ ಪಂಚಾಯತ್ ಗಡಿ ಗುರುತು ಕಾರ್ಯ ಪೂರ್ಣಗೊಳ್ಳಲಿಲ್ಲ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಏಕೆ ಗಮನ ಹರಿಸುತ್ತಿಲ್ಲ? ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯೋಜನಾ ಪ್ರಾಧಿಕಾರದ 60-70ಕ್ಕೂ ಕಡತಗಳು ವಿಲೇವಾರಿಯಾಗದ ಹಿನ್ನೆಲೆಯಲ್ಲಿ ಜನರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದೇ ಸಂಕಷ್ಟ ಎದುರಿಸುವಂತಾಗಿದೆ. ನೀವೇನು ಮಾಡುತ್ತಿದ್ದೀರಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣ ಪಂಚಾಯತ್ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೊಲ್ಲೂರಿನ ಅಮ್ಮ ವಸತಿ ಗೃಹದಲ್ಲಿ ಬುಧವಾರ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಯೋಜನಾ ಪ್ರಾಧಿಕಾರದ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಶೀಘ್ರ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಿಆರ್‍ಜಡ್ ಮಿತಿಯನ್ನು 2 ನಿಂದ 3ಗೆ ವಿಸ್ತರಿಸಬೇಕೆಂಬ ಬೇಡಿಕೆಯಿದ್ದು, ಇದರ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದರು.
ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಹರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ 2.67ಲಕ್ಷ ರೂ. ಸಹಾಯಧನ ನೀಡುತ್ತಿದೆ, ಆದರೆ ನೂತನ ಪಟ್ಟಣ ಪಂಚಾಯತ್‍ಗೆ ಇದುವರೆಗೂ ತಂತ್ರಾಂಶ ಅಪ್ಲೋಡ್ ಆಗದಿರುವ ಹಿನ್ನೆಲೆಯಲ್ಲಿ ಈ ಭಾಗದ ಅರ್ಹ ಫಲಾನುಭವಿ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ, ಈ ಬಗ್ಗೆ ಶೀಘ್ರ ಅಗತ್ಯ ಕ್ರಮ ಕೈಗೊಂಡು ನ್ಯೂನ್ಯತೆಗಳನ್ನು ಸರಿಪಡಸಿಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಳೆಯುತ್ತಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಕೊಲ್ಲೂರಿನಲ್ಲಿ ಸುಮಾರು 6.5 ಕೋಟಿ ರೂ. ವೆಚ್ಚದಲ್ಲಿ ರಿಂಗ್‍ರೋಡ್ ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಸರ್ವೆ ಕಾರ್ಯ ನಡೆದಿದ್ದು, 3.5 ಕೋಟಿ ರೂ. ಭೂಸ್ವಾಧೀನಕ್ಕಾಗಿ ಹಾಗೂ 3 ಕೋಟಿ ರೂ. ವೆಚ್ಚದಲ್ಲಿ ರಿಂಗ್ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸುಸಜ್ಜಿತ ಸ್ಮಶಾನ ನಿರ್ಮಾಣಕ್ಕೆ 5.56 ಎಕ್ರೆ ಹಾಗೂ ಕಸವಿಲೇವಾರಿಗೆ 8.6 ಎಕ್ರೆ ಜಾಗ ಗುರುತಿಸಲಾಗಿದ್ದು, ಕಟ್ಟಡ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಗಾಗಿ ಅನುದಾನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ಅಸಮರ್ಪ ಕಾಮಗಾರಿ: ಚತುಷ್ಪತ ಹೆದ್ದಾರಿ ಕುಂದಾಪುರದಿಂದ ಶಿರೂರು ತನಕ ಅಸಮರ್ಪಕ ಕಾಮಗಾರಿಯಿಂದಾಗಿ ಪ್ರತಿದಿನ ಅವಘಡಗಳು ಸಂಭವಿಸುತ್ತಿದೆ, ತಲ್ಲೂರು, ಹೆಮ್ಮಾಡಿ, ಮುಲ್ಲಿಕಟ್ಟೆ, ತ್ರಾಸಿ, ಮರವಂತೆ, ನಾವುಂದ, ಕಿರಿಮಂಜೇಶ್ವರ, ನಾಗೂರು, ಕಂಬದಕೋಣೆ, ಉಪ್ಪುಂದ, ಬಿಜೂರು, ಯಡ್ತರೆ, ಬೈಂದೂರು ಭಾಗದಲ್ಲಿ ಸರ್ವಿಸ್ ರಸ್ತೆ, ಅಸಮರ್ಪಕ ಚರಂಡಿ, ಬೀದಿ ದೀಪದ ಸಮಸ್ಯೆಯಿಂದಾಗಿ ಜನ ಹೈರಣಾಗಿದ್ದಾರೆ. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗುತ್ತಿದೆ, ಈ ಬಗ್ಗೆ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೆದ್ದಾರಿ ಅಕಾರಿಗಳಿಗೆ ಸೂಚನೆ ನೀಡಿದ ಸಂಸದರು, ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದರು.
94ಸಿ ಯೋಜನೆಯಡಿ ಹಕ್ಕುಪತ್ರ: ಗ್ರಾಮೀಣ ಭಾಗದಲ್ಲಿ ಹಲವಾರು ವರ್ಷಗಳ ಹಿಂದೆ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಸಿಕೊಂಡವರಿಗೆ ಹಕ್ಕುಪತ್ರ ನೀಡುವ ಕೆಲಸವಾಗಬೇಕು ಎಂದ ಸಚಿವರು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಎಸಿಯವರಿಗೆ ಸೂಚನೆ ನೀಡಿದರು. ವಂಡ್ಸೆಯಲ್ಲಿ ಮೆಸ್ಕಾಂ ಸಬ್ ಸ್ಟೇಷನ್ ತೆರೆಯಲು ಜಾಗ ಗುರುತಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಜಿಲ್ಲಾಕಾರಿ ಜಿ. ಜಗದೀಶ, ಡಿಎಫ್‍ಓ ಆಶಿಷ್ ರೆಡ್ಡಿ, ಕುಂದಾಪುರ ಸಹಾಯಕ ಕಮೀಷನರ್ ಕೆ. ರಾಜು, ರಮೇಶ, ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಬಾಬು ಶೆಟ್ಟಿ, ರೋಹಿತ್ ಶೆಟ್ಟಿ ಉಪಸ್ಥಿತರಿದ್ದರು.