ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಲಾಭಗಳಿಕೆಯ ಸಂಶೋಧನೆ ಸಮಷ್ಟಿಯ ಶ್ರೇಯಸ್ಸಿಗೆ ಕೊಡುಗೆ ನೀಡದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಬಯೋಟೆಕ್ನಾಲಜಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಘಟಕದ ಸಹಯೋಗದಲ್ಲಿ ಮಿಜಾರಿನ ಎಂಬಿಎ ಸೆಮಿನಾರ್ ಹಾಲ್‌ನಲ್ಲಿ ನಡೆದ ಕೊರೊನಾ ನಂತರದಲ್ಲಿ ಜೈವಿಕ ವಿಜ್ಞಾನದ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಆನ್ಲೈನ್ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಲಾಭದ ನಿರೀಕ್ಷೆಯಿಂದ ಸಂಶೋಧನೆ ನಡೆಸಬಾರದು. ಸಂಶೋಧನೆಗೆ ಅಗತ್ಯವಿರುವ ಪ್ರೇರಣೆ ಯಾವುದೇ ಮೂಲದಿಂದ ಪಡೆಯಬಹುದು. ತರಗತಿಯೊಳಗಿನ ಜ್ಞಾನದೊಂದಿಗೆ ಹೊಸ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದು ಕಲಿಕೆಗೆ ಅಗತ್ಯ. ಕೋವಿಡ್ ನಿಯಂತ್ರಣದಲ್ಲಿ ವಿಜ್ಞಾನ ಪ್ರಮುಖ ಪಾತ್ರವಹಿಸಿದೆ. ಕೊರೊನಾ ಪ್ರಭಾವದಿಂದ ವಿಜ್ಞಾನದ ತೀಕ್ಷಣೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಶೋಧನಾ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಪ್ರಸ್ತುತ ಪ್ರಪಂಚವು ಕೊರೊನಾ ಭೀತಿಯಲ್ಲೇ ಬದುಕುವ ಪರಿಸ್ಥಿತಿಯಲ್ಲಿದೆ ಆದ್ದರಿಂದ ವಿಜ್ಞಾನ ಜನರಲ್ಲಿ ಆತ್ಮವಿಶ್ವಾಸ ಹಾಗೂ ಆಶಾವಾದ ಹುಟ್ಟುಹಾಕಬೇಕು. ವಿಜ್ಞಾನದ ಉದ್ದೇಶ ಲಾಭಗಳಿಸುವುದಾಗದೇ, ಮಾನವ ಮತ್ತು ಪರಿಸರದ ನಡುವಿನ ಅಂತರವನ್ನು ಭರಿಸುವ ಸೇತುವೆಯಾಗಬೇಕು ಎಂದರು.
ಸೆಮಿನಾರ್‌ನಲ್ಲಿ ಇಂಗ್ಲೆಂಡ್‌ನ ಬೆಡ್ಫೋಶೈರ್ ವಿಶ್ವವಿದ್ಯಾನಿಲಯದ ಲೈಫ್ ಸಯನ್ಸ್ ವಿಭಾಗದ ಡಾ. ರಮ್ಯ ಶನಿವಾರಸಂತೆ ಲೀಲೆಶ್, ‘ಜಿನೋಮ್ ಹಾಗೂ ವಾಕ್ಸಿನ್’ ಕುರಿತು ಮಾತನಾಡಿದರು. ಮನೇಸರ್‌ನ ಮ್ಯಾನ್‌ಕೈಂಡ್ ರಿಸರ್ಚ್ ಸೆಂಟರ್‌ನ ಡಾ. ಶ್ರೀನಿವಾಸ ರೆಡ್ಡಿ ‘ಡ್ರಗ್ ಡಿಸ್ಕವರಿ’ ಜಾರ್ಜ್ ವಾಶಿಂಗ್‌ಟನ್ ವಿಶ್ವವಿದ್ಯಾನಿಲಯದ ಪೋಸ್ಟ್ ಡಾಕ್ಟೋರಲ್ ಸೈಂಟಿಸ್ಟ್ ಡಾ. ಆಶಿತೋಷ್ ಏಂಡೆ ‘ಕ್ಯಾನ್ಸರ್ ರಿಸರ್ಚ್ ಆಂಡ್ ಇಂಪಾಕ್ಟ್ ಆಫ್ ಕೋವಿಡ್ 19 ಡೆನ್‌ಮಾರ್ಕ್‌ನ ಕೋಪನ್‌ಹ್ಯಾಗನ್ ವಿವಿಯ ಸಹಾಯಕ ಪ್ರಾಧ್ಯಾಪಕ ಮಹೇಶ್ ಎಂ. ಪೂಜಾರಿ ಪ್ರಾಣಿ ಆಧಾರಿತ ಆಹಾರ ಪ್ರೋಟೀನ್‌ಗಳನ್ನು ಪರ್ಯಾಯ ಪ್ರೋಟೀನ್‌ನೊಂದಿಗೆ ಬದಲಾಯಿಸುವುದರ ಸವಾಲಿನ ಕುರಿತು ವಿಷಯ ಮಂಡಿಸಿದರು.
ಸೆಮಿನಾರ್‌ನಲ್ಲಿ ವಿದ್ಯಾರ್ಥಿಗಳ 3 ಮೌಖಿಕ ಹಾಗೂ 10 ಇ-ಪೋಸ್ಟರ್ ಪ್ರಸ್ತುತಿಪಡಿಸಲಾಯಿತು. ಸ್ನಾತಕೋತ್ತರ ಹಾಗೂ ಪದವಿ ಬಯೋಟೆಕ್ನಾಲಜಿ ವಿಭಾಗದ 125 ವಿದ್ಯಾರ್ಥಿಗಳು ಸೆಮಿನಾರ್‌ನಲ್ಲಿ ಭಾಗವಹಿಸಿದ್ದರು. ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ರಶ್ಮಿ ಉಪಸ್ಥಿತರಿದ್ದರು. ಸ್ನಾತಕೋತ್ತರ ಬಯೋಟೆಕ್ನಾಲಜಿ ವಿಭಾಗದ ಸಂಯೋಜಕ ಡಾ. ರಾಮ್ ಭಟ್ ಪಿ ಸ್ವಾಗತಿಸಿ, ವಿದ್ಯಾರ್ಥಿನಿ ಮೃಧುನ ವಂದಿಸಿದರು, ಮನಸ್ವಿ ಕಾರ್ಯಕ್ರಮ ನಿರೂಪಿಸಿದರು.