ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಜೆಸಿಐ ಕುಂದಾಪುರ ಸಿಟಿಯ ಮಹಿಳಾ ಘಟಕ ಜೆಸಿರೆಟ್ ಕುಂದಾಪುರ ಸಿಟಿ ಇದರ ಸಹಯೋಗದಲ್ಲಿ ಮಹಿಳಾದಿನ ದ ಪ್ರಯುಕ್ತ ಹಮ್ಮಿಕೊಂಡ ಮಹಿಳಾ ಉತ್ಸವ್- ‘ಬಂಧನ್’-2021′- ಸಪ್ತಾಹದ ಅಂಗವಾಗಿ ನಡೆದ ಮಾಹಿತಿ ಉಪನ್ಯಾಸ ಕಾರ್ಯಕ್ರಮ ಇಲ್ಲಿನ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಕುಂದಾಪುರದ ಎ.ಎಸ್.ಐ ಸುಧಾಕರ್ ಮಾತನಾಡಿ, ಆತ್ಮರಕ್ಷಣಾ ಮಾರ್ಗಗಳ ನಿಖರವಾದ ತಿಳುವಳಿಕೆ ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಗೂ ಇರಬೇಕು. ಆತ್ಮ ರಕ್ಷಣೆಯ ಸ್ಪಷ್ಟ ಅರಿವು ದೇಹದಲ್ಲಿ ಶಕ್ತಿ, ಧೃಢತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಜೆ.ಸಿ.ಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಮಾತನಾಡಿ, ಆತ್ಮರಕ್ಷಣೆಯೆಂದರೆ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೇ ಅಗತ್ಯವಿದ್ದ ಇತರರಿಗೂ ಸಹಾಯ ಮಾಡುವುದಾಗಿರುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣಾ ಅಂಗವಾಗಿ ಜೆ.ಸಿಐ ಕುಂದಾಪುರ ಸಿಟಿಯವರು ವಾರದುದ್ದಕ್ಕೂ ನಡೆಸುತ್ತಿರುವ ಮಾಹಿತಿ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಮಾತನಾಡಿ, ಮಹಿಳೆಯರಲ್ಲಿ ಆತ್ಮಸ್ಥೈರ್ಯವಿದ್ದು, ಸಮಸ್ಯೆಯನ್ನು ಇತರರೊಂದಿಗೆ ಹಂಚಿಕೊಂಡರೆ ಹಲವು ಸಂಘಸಂಸ್ಥೆಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಜೆಸಿಐ ಕುಂದಾಪುರ ಸಿಟಿ ಇದರ ಸ್ಥಾಪಕಾಧ್ಯಕ್ಷರಾದ ಹುಸೇನ್ ಹೈಕಾಡಿ, ನಿಕಟಪೂರ್ವ ವಲಯಾಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ಜೆಸಿಐ ಅಧ್ಯಕ್ಷರಾದ ವಿಜಯ ಭಂಡಾರಿ, ವಲಯಾಧಿಕಾರಿ ಶ್ರೀ ಪ್ರಶಾಂತ ಹವಾಲ್ದಾರ್, ಜ್ಯೂನಿಯರ್ ಜೆ.ಸಿಯ ಅಧ್ಯಕ್ಷರಾದ ಸ್ಯಾಮ್ಯುಯಲ್ ಲೂಯಿಸ್ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಜೆಸಿರೆಟ್ ಕುಂದಾಪುರ ಸಿಟಿ ಇದರ ಅಧ್ಯಕ್ಷರಾದ ಡಾ. ಸೋನಿಯ ಸ್ವಾಗತಿಸಿದರು. ಜೆ.ಸಿಐ ಕುಂದಾಪುರ ಸಿಟಿಯ ಕಾರ್ಯದರ್ಶಿ ಗುರುರಾಜ್ ಕೋತ್ವಾಲ್ ರವರು ಧನ್ಯವಾದ ಸಲ್ಲಿಸಿದರು. ಜೆಸಿರೆಟ್ ಅಧ್ಯಕ್ಷೆ ಡಾ. ಸೋನಿ ಮತ್ತು ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರೆಸಿಲ್ಲಾ ಕಾರ್ಯಕ್ರಮ ನಿರ್ವಹಿಸಿದರು.