Kundapra.com ಕುಂದಾಪ್ರ ಡಾಟ್ ಕಾಂ

ಮಾ.14ಕ್ಕೆ ‘ಮೂಕಜ್ಜಿ’ – ಬದುಕು ಮತ್ತು ಸಮಗ್ರ ಸಾಹಿತ್ಯ ಪುಸ್ತಕ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖ್ಯಾತ ಆಶು ಕವಯಿತ್ರಿ ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ಮತ್ತು ಸಮಗ್ರ ಸಾಹಿತ್ಯ ‘ಮೂಕಜ್ಜಿ’ ಹೊತ್ತಗೆ ಅನಾವರಣ 14ರ ಸಂಜೆ 3.30ಕ್ಕೆ ನಾಗೂರಿನ ರಾಮಕೃಷ್ಣ ಐತಾಳ್ ಕಾಂಪೌಂಡ್‌ನ ‘ಸುಧಾಮ’ದಲ್ಲಿ ನಡೆಯುವುದು.

ಯು. ಸುಬ್ರಹ್ಮಣ್ಯ ಐತಾಳ್ ಸಂಪಾದಿಸಿ, ಉಳ್ಳೂರು ಮೂಕಜ್ಜಿ ಪ್ರತಿಷ್ಠಾನ ಪ್ರಕಟಿಸಿರುವ ಈ ಕೃತಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ಅಧ್ಯಕ್ಷತೆಯಲ್ಲಿ ಕುಂದಾಪುರದ ಹಿರಿಯ ನ್ಯಾಯವಾದಿ ಹಾಗೂ ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಬಿಡುಗಡೆಗೊಳಿಸಿ, ’ಕುಂದಗನ್ನಡ ಸಾಹಿತ್ಯಕ್ಕೆ ಮೂಕಜ್ಜಿಯ ಕೊಡುಗೆ’ ಕುರಿತು ಉಪನ್ಯಾಸ ಮಾಡುವರು. ನಿವೃತ್ತ ಪ್ರಾಧ್ಯಾಪಕಿ, ಹಿರಿಯ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಮೂಕಜ್ಜಿ ಸಮಗ್ರ ಸಾಹಿತ್ಯ ವಿಮರ್ಶೆ ನಡೆಸುವರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಪುಸ್ತಕವನ್ನು ಪರಿಚಯಿಸುವರು. ಅಶ್ವಿನಿ ಐತಾಳ್ ಮತ್ತು ರಾಕೇಶ್ ಹೊಸಬೆಟ್ಟು ಅವರಿಂದ ಮೂಕಜ್ಜಿ ಹಾಡುಗಳ ರಸಧಾರೆ ಕಾರ್ಯಕ್ರಮ ನಡೆಯುವುದು ಎಂದು ಪ್ರತಿಷ್ಠಾನ ಪ್ರಕಟಿಸಿದೆ.

ಮೂಕಜ್ಜಿ ಹೆಸರಿನಿಂದ ಪ್ರಸಿದ್ಧರಾಗಿರುವ ಮೂಕಾಂಬಿಕೆ ಅಮ್ಮ ಕುರಿತೋದದ ಕಾವ್ಯ ಪ್ರಯೋಗ ಮತಿ. ಹತ್ತಕ್ಕೆ ವಿವಾಹ, ಹದಿನೈದಕ್ಕೆ ತಾಯ್ತನ. ಹದಿನಾರಕ್ಕೆ ವೈಧವ್ಯ. ಒಡಲಾಳದ ನೋವು ನಲಿವುಗಳಿಗೆ ಧ್ವನಿಯಾದುದು ಅವರ ಆಶು ಕವಿತ್ವ, ಕಥೆ. ನಿಂತಲ್ಲಿ, ಕುಂತಲ್ಲಿ ಸಾಹಿತ್ಯದ ಕಣಜ ಸೃಷ್ಟಿಸಿದ ಅವರು ಜಾತಿ, ಧರ್ಮ, ಲಿಂಗದ ತಡೆಗೋಡೆಗಳ ಹಂಗು ತೊರೆದು ಬದುಕಿದವರು. ಒಂದು ಶತಮಾನದ ದೇಶದ ಮತ್ತು ಸಮಾಜದ ಸ್ಥಿತ್ಯಂತರವನ್ನು ತಮ್ಮ ಕೃತಿಗಳಲ್ಲಿ ಬಿಂಬಿಸಿದವರು. ತೀರ ತಡವಾಗಿ, ಅವರ ವೃದ್ಧಾಪ್ಯದಲ್ಲಿ ಸಾರಸ್ವತ ಲೋಕದ ಕಣ್ಣಿಗೆ ಬಿದ್ದ ಅವರ ಅಭಿಜಾತ ಪ್ರತಿಭೆ ಮತ್ತು ಕೃತಿಗಳು ಬಿಡಿಬಿಡಿಯಾಗಿ ಪ್ರಕಟಗೊಂಡಿವೆ. ಅವರ ಬಗ್ಗೆ ಸಂಶೋಧಕರಿಂದ, ವಿದ್ವಾಂಸರಿಂದ ಲೇಖನಗಳು, ಪುಸ್ತಕಗಳು ಬಂದಿವೆ. ಅವರ ಒಂದು ಕವನ ಪದವಿ ಪಠ್ಯದಲ್ಲಿ ಸೇರಿದೆ. ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವೂ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ. ವಿವಿಧೆಡೆ ಹರಡಿಕೊಂಡಿರುವ ಅವರ ಸಮಗ್ರ ಸಾಹಿತ್ಯವನ್ನು, ಅವರ ಕುರಿತಾಗಿ ಬಂದ ಬರೆಹಗಳನ್ನು, ಅವರ ಬದುಕಿನ ಚಿತ್ರಣವನ್ನು ಸುಬ್ರಹ್ಮಣ್ಯ ಐತಾಳ್ ಸಂಪಾದಿಸಿ ಈ ಪುಸ್ತಕದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.

Exit mobile version