Kundapra.com ಕುಂದಾಪ್ರ ಡಾಟ್ ಕಾಂ

ಬದಲಾಗುತ್ತಿರುವ ಜಗತ್ತಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು: ವಿವೇಕ್ ಆಳ್ವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಸೀಮಿತರಾಗದೇ ಹೆಚ್ಚಿನ ಜ್ಞಾನವನ್ನು ಪಡೆಯಲು ಉತ್ಸುಕರಾಗಿರಬೇಕು. ಕಲಿಕೆಯಲ್ಲಿ ಯಾವುದೇ ವಿಷಯದ ಬಗ್ಗೆ ಆಳವಾದ ಅಧ್ಯಯನ ಮತ್ತು ಅದರ ಸೃಜನಶೀಲ ಪ್ರಸ್ತುತಿ ಮುಖ್ಯವಾದದ್ದು. ಬದಲಾಗುತ್ತಿರುವ ಜಗತ್ತಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾದ ‘ಸವ್ಯಸಾಚಿ-2021’ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಹೆಚ್ಚಿನ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪಿಯು ಹಂತವನ್ನು ಸರಿಯಾಗಿ ಗ್ರಹಿಸುವಲ್ಲಿ ಎಡವುತ್ತಾರೆ. ಮುಂದಿನ ಶಿಕ್ಷಣದ ಹಾದಿಗಳ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿಯಿರುವುದಿಲ್ಲ. ಇದು ಭವಿಷ್ಯದಲ್ಲಿ ಅವರಿಗೆ ಸವಾಲಾಗಬಹುದು. ಆದ್ದರಿಂದ ಪಿಯು ಹಂತದಲ್ಲಿ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್  ಚಿಕ್ಕಂದಿನಿಂದಲು ಹೆತ್ತವರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ, ಆದರೆ ಪ್ರತೀ ವಿದ್ಯಾರ್ಥಿಯು 18 ವಯಸ್ಸಿನ ನಂತರ ತಾವೇನಾಗಬೇಕೆಂಬ ನಿರ್ಧಾರವನ್ನು ತಾವೇ ತೆಗೆದುಕೊಳ್ಳುವಂತಾಗಬೇಕು. ಪದವಿ ಪೂರ್ವ ಶಿಕ್ಷಣದ ಬಳಿಕ ನೂರಾರು ದಾರಿಗಳಿರುತ್ತವೆ ಆದರೆ ನಾವು ಯಾವುದನ್ನು ಆಯ್ಕೆ ಮಾಡಬೇಕೆಂಬ ಅರಿವು ನಮಗಿರಬೇಕು ಎಂದು ಹೇಳಿದರು.

ಕ್ವಿಝ್ ಮಾಸ್ಟರ್ ಸುಮಂತ್ ಪೂಜಾರಿ ಕ್ವಿಝ್ ನಡೆಸಿಕೊಟ್ಟರು. ಕಾಮರ್ಸ್ ವಿಭಾಗದ ಸಂಯೋಜಕಿ ಶರ್ಮಿಳಾ ಕುಂದರ್ ಸ್ವಾಗತಿಸಿದರು. ತೃತಿಯ ಬಿ.ಕಾಂ ವಿದ್ಯಾರ್ಥಿನಿ ಶರಣ್ಯದೇವಿ ನಿರೂಪಿಸಿದರು. ಕಾಮರ್ಸ್ ವಿಭಾಗದ ಕಾರ್ಯಕ್ರಮ ಸಂಯೋಜಕ ಬಾಲಕೃಷ್ಣ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾಲೇಜುಗಳಿಂದ ಒಟ್ಟು 54 ತಂಡಗಳಿಂದ 112 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆಳ್ವಾಸ್ ಪಿಯು ಕಾಲೇಜಿನ ಆಯುಷ್ ಮಂಜುನಾಥ್ ಹಾಗೂ ಪ್ರಜ್ವಲ್ ಹಿರೇಮಠ ಪ್ರಥಮ, ರೋಟರಿ ಪಿಯು ಕಾಲೇಜಿನ ಹರ್ಷಿತ್ ಹಾಗೂ ಚಿನ್ಮಯಿ ದ್ವಿತೀಯ ಹಾಗೂ ಜ್ಞಾನಸುಧಾ ಕಾಲೇಜಿನ ವಿನೀತ್ ಕಿಣಿ ಹಾಗೂ ಸೃಜನ್ ತೃತೀಯ ಸ್ಥಾನವನ್ನು ಪಡೆದರು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ ತಂಡಗಳಿಗೆ ಕ್ರಮವಾಗಿ ರೂ 3000, ರೂ2000, ರೂ 1000ವನ್ನು ನೀಡಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಬಹುಮಾನ ವಿತರಿಸಿದರು.

Exit mobile version