ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ರಿ. ವತಿಯಿಂದ ಪ್ರತಿವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ‘ಸೇವಾ ಭೂಷಣ ಪ್ರಶಸ್ತಿ’ಗೆ ರಂಗಭೂಮಿ ಕಲಾವಿದೆ ರೇವತಿರಾಂ ಕುಂದನಾಡು ಅವರನ್ನು ಆಯ್ಕೆ ಮಾಡಲಾಗಿದೆ.
ಮಾರ್ಚ್ 21ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಎಚ್. ಎಲ್.ಯಮುನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕನ್ಯಾನ ಗುಡ್ಡೆಯಂಗಡಿ ಮೂಲದವರಾದ ಅವರು ಕುಂದಾಪುರ ರಂಗ ಅಧ್ಯಯನ ಕೇಂದ್ರದಲ್ಲಿ ನಾಟಕ ಡಿಪ್ಲೋಮಾ ಪದವಿ ಪಡೆದಿರುತ್ತಾರೆ. ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಆಧುನಿಕ ರಂಗಭೂಮಿಯಲ್ಲಿ ಶಿವಮೊಗ್ಗ ರಂಗಾಯಣ ಸೇರಿದಂತೆ, ರಾಜ್ಯದ ಹಲವು ರಂಗತಂಡದಲ್ಲಿ ನಟನೆ, ನಿರ್ದೇಶನದ ಜೊತೆಗೆ ರಂಗ ಹಿನ್ನಲೆಯಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ.
ಸಾಹಿತ್ಯದಲ್ಲೂ ಆಸಕ್ತಿ ಇರುವ ಇವರು ಹಲವಾರು ಕಥೆ – ಕವಿತೆ – ನಾಟಕಗಳನ್ನು ಬರೆದಿರುತ್ತಾರೆ. ಮಕ್ಕಳ ನಾಟಕಗಳನ್ನು ಬರೆದು ಸ್ವತಃ ನಿರ್ದೇಶಿಸಿದ್ದಾರೆ.
ಸಾಣೇಹಳ್ಳಿಯ ಶಿವದೇಶ ಸಂಚಾರದಲ್ಲಿ ಎರಡು ಹಿಂದೀ ನಾಟಕಗಳು ಹಲವು ರಾಜ್ಯಗಳಲ್ಲಿ ಪ್ರದರ್ಶನಗೊಂಡಿದ್ದು, ಈ ಭಾರತ ರಂಗ ಪಯಣದಲ್ಲಿ ಭಾಗಿಯಾಗಿದ್ದಾರೆ.
ಆಧುನಿಕ ರಂಗಭುಮಿಯಲ್ಲಿ ಕರ್ನಾಟಕದ ಹಲವು ರಂಗ ತಂಡಗಳಲ್ಲಿ ಗುರುತಿಸಿಕೊಂಡಿರುವ ಇವರು ಉತ್ತಮ ರಂಗ ನಟಿ ಎಂಬ ಜನಮನ್ನಣೆಗಳಿಸಿರುತ್ತಾರೆ.