ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಾವುದೇ ಸಮ ಸ್ಯೆಯೂ ಪರಿಹಾರವಾಗದೇ ಇರು ವಂತಹ ಸ್ಥಿತಿಯಲ್ಲಿ ಇರುವುದಿಲ್ಲ. ವಕೀಲರು ಪರಸ್ಪರ ಸಮನ್ವಯ ಸಾಧಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅಭಿಪ್ರಾಯಪಟ್ಟರು.
ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ, ವಕೀಲರ ಸಂಘದ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಕರಣವನ್ನು ದೀರ್ಘಾವಧಿ ಮುಂದುವರಿಸುವ ಬದಲು ಕಕ್ಷಿದಾರ ಸ್ನೇಹಿಯಾಗಿ ಅದನ್ನು ಬೇಗನೆ ಇತ್ಯರ್ಥ ಪಡಿಸಲು ಪ್ರಯತ್ನಿಸಬೇಕು. ಪ್ರತಿಯೊಬ್ಬ ಕಕ್ಷಿದಾರರಿಗೂ ತೀರ್ಪು ಏನಾಗುತ್ತದೆ ಎನ್ನುವುದಕ್ಕಿಂತ ಸಮಸ್ಯೆ ಪರಿಹಾರ ಆಗಬೇಕು ಎನ್ನುವ ನಿರೀಕ್ಷೆ ಇರುತ್ತದೆ. ಕಕ್ಷಿದಾರರಲ್ಲಿ ವಿಶ್ವಾಸ ಮೂಡಿಸುವುದರಿಂದ ಪರಿಹಾರದ ದಾರಿ ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.
ಕಳೆದ ಬಾರಿ ರಾಜ್ಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ 10 ಲಕ್ಷ ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಈ ಬಾರಿ ಇದೇ 27 ರಂದು ಲೋಕ ಅದಾಲತ್ ನಡೆಯಲ್ಲಿದೆ. ಕುಂದಾಪುರದಲ್ಲಿ 900 ಪ್ರಕರಣ ಇತ್ಯರ್ಥ ಮಾಡಲು ಬೇಡಿಕೆ ಬಂದಿದೆ, ಇದನ್ನು 2,000 ಕ್ಕೆ ಹೆಚ್ಚಿಸಲು ಪ್ರಯತ್ನ ಆಗಬೇಕು. ಡಿಸೆಂಬರ್ ಒಳಗೆ ಇಲ್ಲಿನ ನೂತನ ಕಟ್ಟಡ ನಿರ್ಮಾಣಗೊಳ್ಳಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಸಳ್ವಾಡಿ ನಿರಂಜನ ಹೆಗ್ಡೆ, ‘ಹೊಸ ಕಟ್ಟಡಕ್ಕೆ ಹೆಚ್ಚುವರಿ ನ್ಯಾಯಾಲಯಗಳು ಸ್ಥಳಾಂತರಗೊಳ್ಳಲಿದೆ. ಇಲ್ಲಿ 4 ನ್ಯಾಯಾಲಯ ನಡೆಸಲು ಅವಕಾಶ ಇರುವುದರಿಂದ ಚೆಕ್ ಪ್ರಕರಣಗಳ ವಿಚಾರಣೆಗೆ ಇನ್ನೊಂದು ನ್ಯಾಯಾಲಯ ಮಂಜೂರು ಮಾಡಬೇಕು. ಉಡುಪಿಗೆ ವರ್ಗಾವಣೆಗೊಂಡಿರುವ ಭೂ ಸ್ವಾಧೀನ ಪ್ರಕರಣ ಕುಂದಾಪುರಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದರು.
ಜಿಲ್ಲಾ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ. ಎನ್, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನರಹರಿ ಪ್ರಭಾಕರ ಮರಾಠೆ, ಹಿರಿಯ ಸಿವಿಲ್ ನ್ಯಾಯಾಧೀಶ ರಂಗೇಗೌಡ, ಪ್ರಧಾನ ಸಿವಿಲ್ ನ್ಯಾಯಾಧೀಶ ದಾನೇಶ್ ಮುಗಳಿ, ಜೆಎಂಎಫ್ ಸಿ ನ್ಯಾಯಾಧೀಶೆ ನಾಗರತ್ನಮ್ಮ ಇದ್ದರು.
ವಕೀಲರ ಸಂಘದ ಪ್ರಮೋದ್ ಹಂದೆ ಸ್ವಾಗತಿಸಿದರು, ಮಲ್ಯಾಡಿ ಜಯರಾಮ ಶೆಟ್ಟಿ ಪರಿಚಯಿಸಿದರು. ಜೆ. ಶ್ರೀನಾಥ್ ರಾವ್ ನಿರೂಪಿಸಿದರು. ರವಿರಾಜ್ ಹೆಗ್ಡೆ ವಂದಿಸಿದರು.