Kundapra.com ಕುಂದಾಪ್ರ ಡಾಟ್ ಕಾಂ

ಪುರಸಭೆ ಆಸ್ತಿ ತೆರಿಗೆ ಪರಿಷ್ಕರಣೆ ವಿಶೇಷ ಸಭೆ: ತೆರಿಗೆ ಹೆಚ್ಚಳಕ್ಕೆ ನಿರ್ಣಯ. ಸಭೆ ಬಹಿಷ್ಕರಿಸಿದ ಕಾಂಗ್ರೆಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2021-22ನೇ ಸಾಲಿಗೆ ತೆರಿಗೆ ದರವನ್ನು ಜನರಿಗೆ ಹೊರೆಯಾಗದಂತೆ, ಮಾರುಕಟ್ಟೆ ದರದ ಅನ್ವಯ ಪರಿಷ್ಕರಿಸಲು ಪುರಸಭೆಯ ವಿಶೇಷ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು. ತೆರಿಗೆ ಏರಿಕೆ ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಸಭೆಯನ್ನು ಬಹಿಷ್ಕರಿಸಿದ ಘಟನೆಯೂ ನಡೆಯಿತು.

ಸೋಮವಾರ ನಡೆದ  ಸಭೆಯಲ್ಲಿ, ಸರ್ಕಾರದ ಸುತ್ತೋಲೆ, ಪುರಸಭೆ ಕೈಗೊಳ್ಳಬಹುದಾದ ನಿರ್ಧಾರಗಳ ಕುರಿತು ಮಾಹಿತಿ ನೀಡಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು, ಸುತ್ತೋಲೆಯನ್ನು ನಿರ್ಲಕ್ಷ್ಯ ಮಾಡಿದರೆ ಅನುದಾನಗಳಿಗೆ ತೊಡಕಾಗಬಹುದು ಎಂದರು. ದರ ಪರಿಷ್ಕರಣೆಯ ಸಂದರ್ಭದಲ್ಲಿ ಪ್ರಾದೇಶಿಕ ಮೌಲ್ಯಮಾಪನ ಆಧರಿಸಿ ವಾಣಿಜ್ಯ, ವಸತಿ, ಖಾಲಿ ನಿವೇಶನಗಳನ್ನು ಪ್ರತ್ಯೇಕವಾಗಿ ಪರಿಗಣಿಸಲು ಅವಕಾಶವಿದೆ ಎಂದರು.

‘ಕೋವಿಡ್ ಕಾಲಘಟ್ಟದಲ್ಲಿ ಜನರಿಗೆ ಹೊರೆಯನ್ನು ಹೇರುವುದು ಇಷ್ಟವಿಲ್ಲ’ ಎಂದ ಕೆ.ಮೋಹನ್ದಾಸ್ ಶೆಣೈ, ‘ಆಡಳಿತ ಹಾಗೂ ವಿಪಕ್ಷ ಸದಸ್ಯರು ಒಟ್ಟಾಗಿ ಚರ್ಚೆ ಮಾಡಬೇಕಿತ್ತು. ಆದರೆ, ಅವರ ಅನುಪಸ್ಥಿತಿಯಲ್ಲಿ ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಸರ್ಕಾರದ ಸಲಹೆ ಹಾಗೂ ಜನ ಸಾಮಾನ್ಯರ ಜೀವನ ನಿರ್ವಹಣೆ ಎರಡನ್ನೂ ಗಮನದಲ್ಲಿ ಇರಿಸಿಕೊಂಡು ದರ ಪರಿಷ್ಕರಣೆ ಮಾಡಬೇಕಾಗಿದೆ’ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ಜಿ.ಕೆ.ಗಿರೀಶ್, ‘ವಿಪಕ್ಷ ಸದಸ್ಯರು ಇಂದಿನ ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಬೇಕಾಗಿತ್ತು. ಸಭೆಗೆ ಗೈರಾಗಿ, ಪಲಾಯನವಾದ ಮಾಡಿರುವುದು ಸರಿಯಲ್ಲ’ ಎಂದರು.

ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಇದ್ದರು.

ಪ್ರತಿಪಕ್ಷ ಕಾಂಗ್ರೆಸ್ ವಿರೋಧ:
ಆಸ್ತಿ ತೆರಿಗೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪುರಸಭೆಯ ಅಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸೋಮವಾರ ನಡೆದ ವಿಶೇಷಸಭೆಗೆ ಗೈರು ಹಾಜರಾಗಿ ತಮ್ಮ ಅಸಮಧಾನ ವ್ಯಕ್ತಪಡಿಸಿದರು.

‘ಕೋವಿಡ್ ಸಂಕಷ್ಟದಿಂದ ಜನಸಾಮಾನ್ಯರು ಇನ್ನೂ ಚೇತರಿಕೆ ಕಾಣದ ಸಂದರ್ಭದಲ್ಲಿ ಆಸ್ತಿ ತೆರಿಗೆ ಏರಿಕೆ ನಿರ್ಧಾರ ಸರಿಯಲ್ಲ. ಈಗಾಗಲೇ ತೆರಿಗೆ ಪರಿಷ್ಕರಣೆಯಾಗಿದ್ದು, ಪುನ: ಏರಿಕೆಯಾದಲ್ಲಿ ಜನರಿಗೆ ಹೆಚ್ಚುವರಿ ಹೊರೆಯಾಗುವುದರಿಂದ ಈ ಹಿಂದಿನ ದರವನ್ನು ಮುಂದುವರಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ ಆದರೂ ಮನವಿಗೆ ಮನ್ನಣೆ ದೊರೆತಿಲ್ಲ ಎಂಬುದು ಪ್ರತಿಪಕ್ಷದ ದೂರು.

‘ಆಸ್ತಿ ತೆರಿಗೆ ಏರಿಸದಂತೆ ಹಾಗೂ 2005-06ರ ದರದಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ಮನವಿ ನೀಡಿದ್ದೇವೆ. ಚರ್ಚೆಗೆ ಅವಕಾಶವಿಲ್ಲದ ಈ ಸಭೆಯಿಂದ ದೂರ ಉಳಿದಿದ್ದೇವೆ. ಜನಪರವಾದ ಹೋರಾಟಕ್ಕೆ ತಯಾರಿದ್ದೇವೆ’. – ಚಂದ್ರಶೇಖರ ಖಾರ್ವಿ, ಪ್ರತಿಪಕ್ಷ ಮುಖಂಡ

 

Exit mobile version