Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ ಸಮಾಜದ ಏಳಿಗೆಗೆ ಸಹಕಾರಿಯಾಗಬೇಕು. ಜನಪರ ಕಾರ್ಯಕ್ರಮಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಕಳೆದ37 ವರ್ಷಗಳಿಂದ ಎಲ್ಲಾ ರಂಗದಲ್ಲೂ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವುದು ಹೆಮ್ಮೆಯ ವಿಷಯ ಎಂದು ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಶಶಿಶಂಕರ ಎಚ್.ಎಂ. ಹೇಳಿದರು.

ಗಂಗೊಳ್ಳಿಯ ಕೆಎಫ್‌ಡಿಸಿ ವಠಾರದಲ್ಲಿ ಜರಗಿದ ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ 37ನೇ ವಾರ್ಷಿಕೋತ್ಸವ ಮತ್ತು ಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆಯ 20ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಗಂಗೊಳ್ಳಿ ಪರ್ಸಿನ್ ಮೀನುಗಾರರ ಸ್ವ ಸಹಾಯ ಸಂಘದ ಅಧ್ಯಕ್ಷ ನಾರಾಯಣ ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜನಾರ್ಧನ ಖಾರ್ವಿ ಶುಭಾಶಂಸನೆಗೈದರು.

ರಾಷ್ಟ್ರೀಯ ಈಜುಪಟು ನಾಗರಾಜ ಖಾರ್ವಿ ಕಂಚುಗೋಡು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉತ್ತಮ ಅಂಕ ಗಳಿಸಿದ ಮತ್ತು ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಸುಧಾಕರ ಖಾರ್ವಿ ಮತ್ತು ಕಾರ್ಯದರ್ಶಿ ಶ್ರೀನಿವಾಸ ಖಾರ್ವಿ ಉಪಸ್ಥಿತರಿದ್ದರು.

ಸುಧಾಕರ ಖಾರ್ವಿ ಸ್ವಾಗತಿಸಿದರು. ಶ್ರೀನಿವಾಸ ಖಾರ್ವಿ ವರದಿ ವಾಚಿಸಿದರು. ವೀಣಾ ಹರೀಶ ಖಾರ್ವಿ ವಿದ್ಯಾರ್ಥಿಗಳ ಮತ್ತು ಶ್ರೀಕಾಂತ ಬಿಲ್ಲವ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು. ವಿಕ್ರಂ ಖಾರ್ವಿ ವಂದಿಸಿದರು.

Exit mobile version