Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ಔಷಧಿಯ ಸಸ್ಯಗಳ ಕುರಿತು ಮಾಹಿತಿ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಔಷಧೀಯ ಸಸ್ಯಗಳ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಇಂತಹ ಬೆಲೆ ಬಾಳುವ ವಸ್ತುಗಳ ಬಗ್ಗೆ ಜ್ಞಾನ ಇರದಿದ್ದರೆ, ಅದನ್ನು ರಕ್ಷಣೆ ಮಾಡಲಾಗುವುದಿಲ್ಲ ಎಂದು ಐಎಫ್‌ಎಸ್ ಅಧಿಕಾರಿ, ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ರಾಜ್ಯ ಔಷಧಿಯ ಸಸ್ಯಗಳ ಪ್ರಾಧಿಕಾರದ ಸಿಇಒ ಸುದರ್ಶನ್ ಜಿ.ಎ ಹೇಳಿದರು.

ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಸಾಂಪ್ರದಾಯಿಕ ಔಷಧಗಳ ಆರ್ಕೈವ್ (ಎಟಿಎಂಎ) ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರದ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಂಚೂಣಿಯ ಅರಣ್ಯ ಸಿಬ್ಬಂದಿಗಳಿಗೆ ನಡೆದ ಔಷಧಿಯ ಸಸ್ಯಗಳ ಕುರಿತ ಮಾಹಿತಿ ಕಾರ್ಯಾಗಾರದ ಉದ್ಘಾಟಕರಾಗಿ ಮಾತನಾಡಿದ ಅವರು, ಅರಣ್ಯಾಧಿಕಾರಿಗಳು, ಅರಣ್ಯ ಸಿಬ್ಬಂದಿಗಳನ್ನು ಒಟ್ಟುಗೂಡಿಸಿ ಇಂತಹ ಮಾಹಿತಿ ಕಾರ್ಯಾಗಾರಗಳನ್ನು ಮಾಡುವುದು ಅವಶ್ಯಕ. ಈ ಮೂಲಕ ರೈತರಿಗೆ ಸಸ್ಯಗಳನ್ನು ನೀಡುವಾಗ ಅದರ ಮಹತ್ವ ಹಾಗೂ ಇದರಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಬಹುದು’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ವಲಯದ ಉಪಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಪ್ರಕೃತಿ ರಕ್ಷತಿ ರಕ್ಷಿತಃ ಎಂಬ ಮಾತಿನಂತೆ, ನಾವು ಪ್ರಕೃತಿಯನ್ನು ಸಂರಕ್ಷಿಸಿದಾಗ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಆರ್ಥಿಕತೆ, ಮತ್ತು ಸಂರಕ್ಷಣೆ ಎರಡರ ಸಮತೋಲನವನ್ನು ಕಾಪಾಡಿಕೊಂಡು ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ, “ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವವೈವಿಧ್ಯಗಳ ನಡುವೆ ಸಮತೋಲವನ್ನು ಕಾಪಾಡಿಕೊಳ್ಳುವುದು ಅಗತ್ಯ. ಸರ್ಕಾರವು ಕೇವಲ ನೆಪ ಮಾತ್ರಕ್ಕೆ ಬಜೆಟ್‌ನಲ್ಲಿ ಔಷಧೀಯ ಸಸ್ಯಗಳಿಗೆ ಒಂದಷ್ಟು ಮೊತ್ತವನ್ನು ಮೀಸಲಿಡುತ್ತಿದೆ. ಆದರೆ ಇದರಲ್ಲಿ ಹೆಚ್ಚಿನವು ಕಾರ್ಯರೂಪಕ್ಕೆ ಬರುತ್ತಿಲ್ಲ. ಇದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ರಾಜ್ಯ-ಕೇಂದ್ರ ಸರ್ಕಾರ ಹೊರತರುವ ಯೋಜನೆಗಳನ್ನು ಜಾರಿಗೆ ತರಲು, ಆಯುರ್ವೇದ – ಕೃಷಿ ಕಾಲೇಜುಗಳು, ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಬೇಕು. ಗುಣಮಟ್ಟದ ಸಸ್ಯಗಳು ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಾಣಸಿಗುತ್ತದೆ. ಅದರ ಬೇರು ಸಹಿತವಾಗಿ ಕೀಳಿ, ಕಾರ್ಪೊರೇಟ್ ಕಂಪನಿಗಳು ಕೋಟಿ ಕೋಟಿ ಹಣಗಳಿಸುತ್ತಿದೆ. ಆದರೆ, ಈ ಗಿಡಗಳಲ್ಲಿರುವ ಔಷಧಿಯ ಗುಣಗಳು ಎಷ್ಟರ ಮಟ್ಟಿಗೆ ಬಳಕೆಯಾಗುತ್ತಿದೆ ಎಂಬುವುದನ್ನು ನಾವು ಅರಿತುಕೊಳ್ಳಬೇಕು” ಎಂದು ಹೇಳಿದರು.

ಈ ಸಂದರ್ಭ ಕುದುರೆಮುಖ ವಲಯದ ಉಪಸಂರಕ್ಷಣಾಧಿಕಾರಿ ರುದ್ರನ್, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಸಜಿತ್ ಎಂ ಉಪಸ್ಥಿತರಿದ್ದರು.

ಎಟಿಎಂಎ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಸುಬ್ರಹ್ಮಣ್ಯ ಪದ್ಯಾಣ ಅತಿಥಿಗಳನ್ನು ಸ್ವಾಗತಿಸಿದರು. ಡಾ| ರವಿಪ್ರಸಾದ್ ವಂದಿಸಿದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಗೀತಾ ಬಿ ಮಾರ್ಕಂಡೆ ಕಾರ್ಯಕ್ರಮವನ್ನು ನಿರೂಪಿಸಿದರು.

 

Exit mobile version