ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಿರಂತರ ಪರಿಶ್ರಮ, ದುಡಿಮೆಯಿಂದ ಜೀವನದಲ್ಲಿ ಯಶಸ್ಸು ಏಳಿಗೆ ಕಾಣಲು ಸಾಧ್ಯವಿದೆ. ಯಾವುದೇ ಕಾರ್ಯವನ್ನು ಯಶಸ್ಸಿನ ಪಥದತ್ತ ಕೊಂಡೊಯ್ಯುವುದು ಸಲಭವಲ್ಲ. ಇದಕ್ಕೆ ಏಕಾಗ್ರತೆ, ಶ್ರದ್ಧೆ ಅವಶ್ಯಕ. ಕಳೆದ ಆರು ದಶಕಗಳಿಂದ ಅಪೂರ್ವ ವಸ್ತುಗಳ ಸಂಗ್ರಹದ ಹವ್ಯಾಸ ಬೆಳೆಸಿಕೊಂಡು ಬಂದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಪೂರ್ವ ಪ್ರಾಚೀನ ವಸ್ತು ಸಂಗ್ರಹಕಾರ ಗಂಗೊಳ್ಳಿಯ ಭಾಸ್ಕರ ಕಲೈಕಾರ್ ಅವರು ತನ್ನ ಸಂಪಾದನೆಯ ಸಾವಿರಾರು ರೂಪಾಯಿ ಹಣವನ್ನು ಹಳೆಯ ಪ್ರಾಚೀಣ ಅಪೂರ್ವ ವಸ್ತುಗಳನ್ನು ಖರೀದಿಸಲು ಉಪಯೋಗಿಸಿ ಗಂಗೊಳ್ಳಿಯಲ್ಲಿ ಸುಸಜ್ಜಿತವಾದ ಮ್ಯೂಸಿಯಂ ನಿರ್ಮಿಸಿರುವುದು ಸ್ತುತ್ಯಾರ್ಹವಾದುದು ಎಂದು ಹಂಗಾರಕಟ್ಟೆ ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.
ಗಂಗೊಳ್ಳಿಯ ಕಲೈಕಾರ್ ಮಠದ ಬಳಿಯಲ್ಲಿ ಸುಮಾರು 25ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ‘ಗಂಗೊಳ್ಳಿ ಭಾಸ್ಕರ ಕಲೈಕಾರ್ ಮ್ಯೂಸಿಯಂ’ನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ರಾಜ್ಯದ ವಿವಿಧೆಡೆ ಸುಮಾರು 75ಕ್ಕೂ ಮಿಕ್ಕಿ ಉಚಿತ ಪ್ರದರ್ಶನ ನೀಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೊಂಕಣಿ ನಕ್ಷತ್ರ ಪ್ರಶಸ್ತಿ, ಕಲಾ ವೈಭವ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳಿಗೆ ಭಾಸ್ಕರ ಕಲೈಕಾರ್ ಭಾಜನರಾಗಿರುವುದು ಅವರ ಶ್ರೇಷ್ಢತೆಗೆ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಕಲೈಕಾರ್ ಅವರ ಕಾರ್ಯವನ್ನು ಶ್ಲಾಘಿಸಿದರು.
ಪತ್ರಕರ್ತ ಯು. ಎಸ್. ಶೆಣೈ, ಅಂಕಣಗಾರ ಕೋ. ಶಿವಾನಂದ ಕಾರಂತ, ಎಂ. ರಾಮಕೃಷ್ಣ ಪೈ, ವಸಂತ ಡಾ. ಎಚ್. ರಾಮಮೋಹನ ಕುಂದಾಪುರ, ಘನಶ್ಯಾಮ ಟಿ.ಮೇಸ್ತ ಮುಂಬೈ, ಡಾ. ಬಾಲಚಂದ್ರ ಮೇಸ್ತ ಹೊನ್ನಾವರ ಶುಭಾಶಂಸನೆಗೈದರು. ಜಿ. ಸರಸ್ವತಿ ಕಲೈಕಾರ್ ಉಪಸ್ಥಿತರಿದ್ದರು.
ಪತ್ರಕರ್ತ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಜಿ.ಭಾಸ್ಕರ ಕಲೈಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರಿ ಡಿ. ಕಲೈಕಾರ್, ದೇವಿಪ್ರಸಾದ್ ಕಲೈಕಾರ್, ವಿದ್ಯಾ ವಿ.ಮೇಸ್ತ, ವಾಸುದೇವ ಮೇಸ್ತ ಬೆಂಗಳೂರು, ಡಾ.ನವ್ಯ ಕಲೈಕಾರ್, ಡಾ.ದೇವರಾಜ್ ಬೆಂಗಳೂರು, ನಾರಾಯಣ ಖಾರ್ವಿ ಅತಿಥಿಗಳನ್ನು ಗೌರವಿಸಿದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಪಿ.ಜಯವಂತ ಪೈ ವಂದಿಸಿದರು.
