ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯಾದ್ಯಂತ ಕರೋನಾ ಹಾವಳಿ ಹೆಚ್ಚುತ್ತಿರುವುದರಿಂದ ಈ ಬಾರಿ ಹೋಳಿ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರಕಾರದ ಆದೇಶವನ್ನು ಮತ್ತು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಿಕೊಳ್ಳಬೇಕು ಎಂದು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಹೇಳಿದರು.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪೂರ್ವಭಾವಿಯಾಗಿ ಜರಗಿದ ಕೊಂಕಣಿ ಖಾರ್ವಿ ಸಮಾಜದ ಮುಖಂಡರ ಹಾಗೂ ಹೋಳಿ ಹಬ್ಬ ಕಮಿಟಿಯ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಹಬ್ಬದಲ್ಲಿ ಡಿಜೆ ಬಳಕೆಯನ್ನು ನಿಷೇಧಿಸಲಾಗಿದೆ. ನಿಗದಿತ ವೇಳೆಯಲ್ಲಿ ಕಾರ್ಯಕ್ರಮವನ್ನು ಮುಗಿಸಬೇಕು. ಯಾರಿಗೂ ಒತ್ತಾಯಪೂರ್ವಕವಾಗಿ ಬಣ್ಣ ಹಾಕಬಾರದು. ಅನ್ಯ ಧರ್ಮೀಯರಿಗೆ ತೊಂದರೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಮುತುವರ್ಜಿ ವಹಿಸಬೇಕು ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಸರಕಾರ ಹೊರಡಿಸುವ ಆದೇಶಗಳನ್ನು ಪಾಲಿಸಲು ಬದ್ಧರಾಗಿರಬೇಕು ಎಂದು ಹೇಳಿದರು.
ಶೀನ ಪಟೇಲ್, ಕೃಷ್ಣ ಪಟೇಲ್, ರಾಮದಾಸ ಪಟೇಲ್, ನಾಗಪ್ಪಯ್ಯ ಪಟೇಲ್, ರಾಘವೇಂದ್ರ ಪಟೇಲ್, ರಾಮಪ್ಪ ಖಾರ್ವಿ, ಸಂತೋಷ ಖಾರ್ವಿ ಗುಡ್ಡೆಕೇರಿ, ಶೀನ ಖಾರ್ವಿ ಕಂಚುಗೋಡು ಹಾಗೂ ಹೋಳಿ ಪಂಗಡದ ಪ್ರಮುಖರು ಉಪಸ್ಥಿತರಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಎಸ್. ಸ್ವಾಗತಿಸಿ, ವಂದಿಸಿದರು.