Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವತಿಯಿಂದ ವಿಶ್ವ ರಂಗಭೂಮಿ ದಿನದ ಅಂಗವಾಗಿ “ಉಪನ್ಯಾಸ – ರಂಗ ಗೀತೆ ಗಾಯನ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತರು ಹಾಗೂ ಆಳ್ವಾಸ್ ನ್ಯೂಸಿಯಂನ ಸಂಯೋಜಕರಾದ ಶ್ರೀಕರ ಎಲ್ ಭಂಡಾರ್‌ಕರ್ ಮಾತನಾಡಿ, ಪ್ರತಿಯೊಬ್ಬರೂ ನಾಟಕದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ನಾಟಕದ ಮಹಿಮೆಯನ್ನು ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಂಯೋಜಕರು ಜೀವನ್ ರಾಮ್ ಸುಳ್ಯ, ಆಧುನಿಕ ಪ್ರಪಂಚದಲ್ಲಿ ನಾಟಕ ಎನ್ನುವುದು ಭರಾಟೆಯಾಗಿಬಿಟ್ಟಿದೆ. ಆದರೆ, ರಂಗಭೂಮಿಯಿಲ್ಲದೆ ಯಾರೂ ಬದುಕಲು ಸಾದ್ಯವಿಲ್ಲ. ಸಣ್ಣ ಮಗುವಿನಿಂದ ಹಿಡಿದು, ಪ್ರತಿಯೊಬ್ಬರೂ ಪ್ರತೀ ಸಂದರ್ಭದಲ್ಲೂ ನಟನೆ ಮಾಡುತ್ತಾರೆ. ಅದರಲ್ಲಿ ಕೆಲವರು ರಂಗಕ್ಷೇತ್ರದಲ್ಲಿ ಜೀವನವನ್ನು ಕಂಡುಕೊಳ್ಳುತ್ತಾರೆ. ಆದರೆ, ಯಾರೂ ಕೂಡ ತಾವು ನಡೆದುಕೊಂಡು ಬಂದ ದಾರಿಯನ್ನು ಮರೆಯಬಾರದು” ಎಂದರು. ರಂಗಭೂಮಿಯ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವ ಬಗ್ಗೆ ಮಾತನಾಡುತ್ತಾ, ಡಿಜಿಟಲ್ ಯುಗದಲ್ಲಿ ಯಾರು, ಯಾವಾಗ ಬೇಕಾದರೂ ಸ್ಟಾರ್ ಆಗುತ್ತಾರೆ. ೨೦-೩೦ ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುವವನಿಗಿಂತಲೂ ಹೆಚ್ಚು ಪ್ರಚಾರ ಒಬ್ಬ ನಿನ್ನೆ ಮೊನ್ನೆ ಬಂದವನಿಗೆ ಸಿಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಇಡೀ ಜಗತ್ತು ಕಟ್ಟಿರೋದು ಮಾತುಗಳಿಂದ ಅಲ್ಲ. ಬದಲಿಗೆ ತನ್ನ ಕ್ರಿಯಾಶೀಲತೆಯಿಂದ. ಪ್ರತಿಯೊಬ್ಬರಲ್ಲೂ ಒಬ್ಬ ನಟ ಇರುತ್ತಾನೆ. ನಾವು ಪ್ರತಿನಿತ್ಯ ಮಾಡುವುದೂ ನಾಟಕವೆ. ಯಾರಿಗೆ ನಾಟಕ ಮಾಡಲು ಬರುವುದಿಲ್ಲವೋ, ಅವರು ಜೀವನದಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ ಎಂದರು.

ರಂಗಭೂಮಿ ದಿನಾಚರಣೆಯ ಪ್ರಯುಕ್ತ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಗೀತೆ ಹಾಗೂ ಧಾಂ ಧೂಂ ಸುಂಟರಗಾಳಿ ನಾಟಕದ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು.

ಈ ಸಂದರ್ಭ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಾರದ ವಾಸುದೇವ್, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎನ್.ಖಂಡಿಗೆ, ಹಿಂದಿ ವಿಭಾಗದ ಮುಖ್ಯಸ್ಥ ಡಾ.ರಾಜೀವ್ ಹಾಗೂ ಕನ್ನಡ ವಿಭಾಗದ ಉಪನ್ಯಾಸಕ ರಾಮ್‌ಪ್ರಸಾದ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಮನುಜ ನೇಹಿಗ ಉದ್ಘಾಟನಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ನಾಗಶ್ರೀ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version