ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆಯ ಶ್ರೀ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಅಲ್ಲಿನ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿಯಿಂದ ಆಭಾರಿ ಸೇವೆ ಭಾನುವಾರ ಸಂಪನ್ನವಾಯಿತು.
ಕಡಲು ನದಿ ಕೈ ಅಳತೆ ನಡುವಿನ ಕಿರಿದಾದ ಪ್ರದೇಶದಲ್ಲಿ ಒಂದೇ ಗರ್ಭಗುಡಿಯಲ್ಲಿ ವರಾಹ, ವಿಷ್ಣು, ನಾರಸಿಂಹ ದೇವರ ಸನ್ನಿಧಿ ಮತ್ತು ಸನಿಹದಲ್ಲಿ ಗಂಗಾಧರೇಶ್ವರ ದೇವಸ್ಥಾನ ಇರುವ ಕಾರಣದಿಂದ ಕಾರಣಿಕ ಧಾರ್ಮಿಕ ಕೇಂದ್ರವೆನಿಸಿರುವ ಇಲ್ಲಿ ಭಕ್ತರು ಸಲ್ಲಿಸುವ ವಿಶೇಷ ಸೇವೆಗಳಲ್ಲಿ ’ಆಭಾರಿ’ ಕೂಡ ಒಂದು. ಮೀನುಗಾರರು ಸುರಕ್ಷಿತ ಹಾಗೂ ಸಮೃದ್ಧ ಮೀನುಗಾರಿಕೆಗೆ ಮತ್ತು ವ್ಯವಸಾಯಗಾರರು ಅತಿವೃಷ್ಟಿ, ಅನಾವೃಷ್ಟಿ ಮುಕ್ತವಾದ ಕೃಷಿಗೆ ಪ್ರಾರ್ಥಿಸಿ ಈ ಹರಕೆ ಸಲ್ಲಿಸುತ್ತಾರೆ.
ಇಂದಿನ ಆಭಾರಿ ಸೇವೆಯ ಭಾಗವಾಗಿ ಬೆಳಿಗ್ಗಿನಿಂದ ಮಧ್ಯಾಹ್ನದ ವರೆಗೆ ವರಾಹ ಸನ್ನಿಧಿಯಲ್ಲಿ ಮಹಾಗಣಪತಿ ಹವನ, ಚಂಡಿಕಾ ಹವನ, ವಿಷ್ಣುಸೂಕ್ತ ಹವನ, ಏಕಾದಶ ರುದ್ರ ಪುರಸ್ಸರ ರುದ್ರ ಹವನ, ಕಲಶಾಭಿಷೇಕ, ಮಹಾಪೂಜೆ, ಉತ್ಸವಗಳು ನಡೆದುವು.
ದೇವಾಲಯಕ್ಕೆ ಹೊಂದಿಕೊಂಡಿರುವ ಸೌಪರ್ಣಿಕಾ ನದಿಯ ನೆಗಳನ ಗುಂಡಿಯಲ್ಲಿ ದೈವಸ್ವರೂಪಿ ಮೊಸಳೆ ನೆಲೆಸಿದೆ ಎಂಬ ಪ್ರತೀತಿ ಇರುವುದರಿಂದ ಆಭಾರಿಯ ವಿಧಿಯಂತೆ ೯ ಹೆಡಿಗೆ ಅನ್ನವನ್ನು ವಾದ್ಯಘೋಷಗಳೊಂದಿಗೆ ತಂದು ಅರ್ಪಿಸಲಾಯಿತು. ೫ ಹೆಡಿಗೆ ಅನ್ನವನ್ನು ಸಮುದ್ರಕ್ಕೆ ಅರ್ಪಿಸಲಾಯಿತು. ಆ ಬಳಿಕ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಎಲ್ಲೆಡೆಗಳಿಂದ ಬಂದ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಸಂಜೆ ಪುಷ್ಪರಥೋತ್ಸವ, ಮಹಾ ರಂಗಪೂಜೆ ನಡೆದುವು.
ನಾಗೇಂದ್ರ ಭಟ್ ನೇತೃತ್ವದ ಋತ್ವಿಜರು ಹೋಮ, ಹವನಗಳನ್ನು ನೆರವೇರಿಸಿದರು. ಮೀನುಗಾರರ ಸೇವಾ ಸಮಿತಿಯ ಪ್ರಮುಖರಾದ ಕೆ. ಎಂ. ಬಚ್ಚ ಖಾರ್ವಿ, ಪಿ. ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ, ಮೋಹನ ಖಾರ್ವಿ, ಶಂಕರ ಖಾರ್ವಿ, ವಾಸುದೇವ ಖಾರ್ವಿ, ಜಿ. ಹೊನ್ನ ಖಾರ್ವಿ, ದೇವಾಲಯದ ಮಾಜಿ ಆಡಳಿತ ಮೊಕ್ತೇಸರ ಕೆ. ರಾಮಚಂದ್ರ ಹೆಬ್ಬಾರ್, ಆಡಳಿತ ಮಂಡಳಿಯ ಮಾಜಿ ಸದಸ್ಯರು ಉಸ್ತುವಾರಿ ನೋಡಿಕೊಂಡರು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಭೇಟಿನೀಡಿ ಪ್ರಸಾದ ಸ್ವೀಕರಿಸಿದರು.