Kundapra.com ಕುಂದಾಪ್ರ ಡಾಟ್ ಕಾಂ

ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 34ನೇ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕಾರಯುಕ್ತ ಶಿಕ್ಷಣ ನೀಡುವುದರಿಂದ ಜೀವನದಲ್ಲಿ ಸತ್ಪ್ರಜೆಗಳಾಗಿ ಬೆಳೆಯುತ್ತಾರೆ. ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ನಮ್ಮ ಪೂರ್ವಜರ ಅನೇಕ ವಿಚಾರಗಳನ್ನು ಮಕ್ಕಳಿಗೆ ಹೇಳಿಕೊಡಬೇಕಾದ ಅವಶ್ಯಕತೆ ಇದ್ದು, ಶಿಶು ಮಂದಿರಗಳು ಈ ದಿಸೆಯಲ್ಲಿ ಮಕ್ಕಳಿಗೆ ಬಾಲ್ಯದಲ್ಲಿ ಅವಶ್ಯವಿರುವ ಶಿಕ್ಷಣ ನೀಡುತ್ತಿದೆ. ಗಂಗೊಳ್ಳಿಯಲ್ಲಿ ಕಳೆದ ೩೪ ವರ್ಷಗಳಿಂದ ನಮ್ಮ ಸಂಸೃತಿಗೆ ಪೂರಕವಾದ ಶಿಕ್ಷಣ ನೀಡುವ ಮೂಲಕ ಸಮಾಜದ ಬೆಳವಣಿಗೆಗೆ ಸಹಕರಿಸುತ್ತಿರುವುದು ಸ್ತುತ್ಯಾರ್ಹವಾದುದು ಎಂದು ಎಚ್. ಸುನೀಲ್ ನಾಯಕ್ ಹೇಳಿದರು.

ಶ್ರೀ ಶಾರದಾ ಮಂಟಪದಲ್ಲಿ ಜರಗಿದ ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 34ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥ ಸುರೇಶ ಹೆಬ್ಬಾರ್ ಆಜ್ರಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಕೃಪಾ ಸುನೀಲ್ ನಾಯಕ್ ಬಹುಮಾನ ವಿತರಿಸಿದರು. ಶಿಶು ಮಂದಿರದ ಸದಸ್ಯರಾದ ಆಶಾ ಸುದನೇಶ ಶ್ಯಾನುಭಾಗ್, ಉಷಾ ಪಾಂಡುರಂಗ ಮಡಿವಾಳ, ವಿಜಯಶ್ರೀ ವಿ.ಆಚಾರ್ಯ, ಅಶ್ವಿತಾ ಜಿ.ಪೈ, ವಸಂತಿ ಎನ್.ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಶು ಮಂದಿರದ ಪುಟಾಣಿಗಳು, ಬಾಲಗೋಕುಲದ ಮಕ್ಕಳು ಹಾಗೂ ಮಾತೆಯರಿಗೆ ಬಹುಮಾನ ವಿತರಿಸಲಾಯಿತು.

ಶಿಶು ಮಂದಿರದ ಅಧ್ಯಕ್ಷೆ ಸವಿತಾ ಉಮಾನಾಥ ದೇವಾಡಿಗ ಸ್ವಾಗತಿಸಿದರು. ಸಂಚಾಲಕ ಡಾ. ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಶು ಮಂದಿರದ ಸದಸ್ಯ ಬಿ. ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಬಿ. ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು.

Exit mobile version