ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ರೈತ ಸಂಘದ ಕಾವ್ರಾಡಿ ಮತ್ತು ತ್ರಾಸಿ ವಲಯದ ಆಶ್ರಯದಲ್ಲಿ ಸೌಕೂರು ಏತ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಸೌಕೂರು ಏತ ನೀರಾವರಿ ಯೋಜನೆಯ ಯೋಜನಾ ಪ್ರದೇಶ, ಮಾವಿನಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ನೀರು ಶೇಖರಣ ಸ್ಥಾವರ, ರಾಜಾಡಿ, ಜಾಡಿ ಮೊದಲಾದ ಪ್ರದೇಶಗಳಿಗೆ ಭೇಟಿ ಮಾತನಾಡಿ, ಯಾವುದೇ ಯೋಜನೆ ಆಗಿರಲಿ ರೈತರು ಯೋಜನೆಯ ಆರಂಭದಲ್ಲಿ ಮುತುವರ್ಜಿ ವಹಿಸಿ, ಯೋಜನೆಯ ಬಗ್ಗೆ ತಿಳಿದುಕೊಂಡರೆ ಕಾಮಗಾರಿ ವ್ಯವಸ್ಥಿತವಾಗಿ ಅನುಷ್ಟಾನವಾಗಲು ಸಾಧ್ಯ. ಕಾಮಗಾರಿ ಅನುಷ್ಟಾನ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಲು ಸಾದ್ಯವಿದೆ. ಕಾಮಗಾರಿ ಮುಗಿದ ನಂತರ ಎಚ್ಚೆತ್ತುಕೊಂಡರೆ ಏನು ಮಾಡಲೂ ಸಾಧ್ಯವಿಲ್ಲ ಎಂದರು.
ಸುಮಾರು 73 ಕೋಟಿ ವೆಚ್ಚದಲ್ಲಿ ಅನುಷ್ಟಾನಗೊಳ್ಳುತ್ತಿರುವ ಈ ಯೋಜನೆ 1350 ಹೆಕ್ಟೇರು ಪ್ರದೇಶದ ಭೂಮಿಗೆ ನೀರು ಸಿಗುತ್ತದೆ. ಈ ಯೋಜನಾ ವ್ಯಾಪ್ತಿಯಲ್ಲಿ ನೀರು ಸಿಗುವ ಎಲ್ಲಾ ಫಲಾನುಭವಿಗಳಿಗೂ ನೀರು ಸಿಗುವಂತಾಗಬೇಕು. ಅವಕಾಶವಿದ್ದೂ ನೀರು ಸಿಗದೆ ಇದ್ದರೆ ಅಲ್ಲಿ ಪ್ರಕರಣ ಜೀವಂತವಿರುತ್ತದೆ. ಅಂತಹ ಯಾವುದೇ ಪ್ರಕರಣ ಜೀವಂತವಿಡಲು ಬಿಡಬೇಡಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಸೌಕೂರು ಏತ ನೀರಾವರಿ ಯೋಜನೆ ಹತ್ತಿರವೇ ಇರುವ ಕರ್ಕುಂಜೆ ಗ್ರಾಮಕ್ಕೆ ಪೂರ್ಣ ಪ್ರಮಾಣದಲ್ಲಿ ಈಗಾಗಲೆ ಗುರುತಿಸಿದ ಪ್ರಕಾರ ಪೂರ್ಣ ಪ್ರಮಾಣದಲ್ಲಿ ನೀರು ಸಿಗುವುದಿಲ್ಲ. ಕರ್ಕುಂಜೆ ಭಾಗದ ಕೃಷಿ ಭೂಮಿಗೆ ಅನುಕೂಲವಾಗುವಂತೆ ನೀರಿನ ಸೌಕರ್ಯ ಒದಗಿಸಬೇಕು. ಕರ್ಕುಂಜೆ ಗ್ರಾಮಕ್ಕೆ ನೀರು ಕೊಡದೆ ವಂಡ್ಸೆಗೆ ನೀರು ಕೊಂಡುಹೋಗುವುದಕ್ಕೆ ನಮ್ಮ ಆಕ್ಷೇಪವಿದೆ. ಕರ್ಕುಂಜೆಗೆ ಪೂರ್ಣಪ್ರಮಾಣದಲ್ಲಿ ನೀರು ಕೊಡದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಧರಣಿಗೆ ಮುಂದಾಗುತ್ತೇವೆ ಎಂದು ಕರ್ಕುಂಜೆ ಭಾಗದ ರೈತರು ಯೋಜನೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.
ವಾರಾಹಿ ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಮಾತನಾಡಿ ಕರ್ಕುಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಿದ್ಧ ಪಡಿಸಲಾದ ಸ್ಥಳಗಳನ್ನು ತಿಳಿಸಿದರು. ಪ್ರತಾಪಚಂದ್ರ ಶೆಟ್ಟಿ ಮಾತನಾಡಿ ಕರ್ಕುಂಜೆ ಗ್ರಾಮಕ್ಕೆ ಪೂರ್ಣ ಪ್ರಮಾಣದ ನೀರು ಸಿಗುವಂತಾಗಬೇಕು. ಯೋಜನೆಯ ಹತ್ತಿರದ ಪ್ರದೇಶಗಳಿಗೆ ಮೊದಲು ನೀರು ಸಿಗುವಂತಾಗಬೇಕು ಎಂದರು.
ಚೆರಿಯಬ್ಬ ಸಾಹೇಬ್ ಮಾತನಾಡಿ ಸೌಕೂರು ಏತ ನೀರಾವರಿ ಯೋಜನೆಯಿಂದ ಗುಲ್ವಾಡಿ, ಸೌಕೂರು ಭಾಗಕ್ಕೆ ನೀರು ಸಿಗುವಂತಾಗಬೇಕು. ಮೊದಲ ಆದ್ಯತೆ ಈ ಗ್ರಾಮಗಳಿಗೆ ನೀಡಿ ನಂತರ ನೀರನ್ನು ಮುಂದೆ ತಗೆದುಕೊಂಡು ಹೋಗಿ ಎಂದರು.
ಪ್ರಭಾಕರ ಶೆಟ್ಟಿ ಮಾತನಾಡಿ ಯೋಜನೆ ಆರಂಭದ ಮೊದಲು ಸಾರ್ವಜನಿಕರ ಸಭೆ ಕರೆಯಲಿಲ್ಲ, ಅಭಿಪ್ರಾಯ ಸಂಗ್ರಹಿಸಲಿಲ್ಲ, ಯೋಜನಾ ಪ್ರದೇಶದ ಗ್ರಾಮ ಪಂಚಾಯತಿಗಳಿಗೆ ಮಾಹಿತಿ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಈ ಯೋಜನೆಯ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಇನ್ನೆರಡು ವಾರದಲ್ಲಿ ನೀಡಲಾಗುತ್ತದೆ. ಯಾವ ಯಾವ ಸರ್ವೇನಂಬ್ರಗಳಲ್ಲಿ ನೀರು ಹರಿದು ಹೋಗುತ್ತದೆ ಎನ್ನುವುದರ ಮಾಹಿತಿ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸೌಕೂರು ಏತ ನೀರಾವರಿ ಯೋಜನೆ ಗುಲ್ವಾಡಿಯಲ್ಲಿ ವಾರಾಹಿ ನದಿಯಲ್ಲಿ 73 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಗುಲ್ವಾಡಿ, ಸೌಕೂರು, ಕರ್ಕುಂಜೆ, ಕೆಂಚನೂರು, ದೇವಲ್ಕುಂದ, ಕನ್ಯಾನ, ಹಟ್ಟಿಯಂಗಡಿ, ಗ್ರಾಮಗಳ 1350 ಹೆಕ್ಟೇರು ಪ್ರದೇಶದ ಭೂಮಿಗೆ ನೀರು ಸಿಗುತ್ತದೆ. ಈಗಾಗಲೇ ಗುಲ್ವಾಡಿಯಲ್ಲಿ ಪಂಪ್ ಹೌಸ ನಿರ್ಮಾಣ ನಿರ್ಮಾಣವಾಗುತ್ತಿದೆ. ಇಲ್ಲಿ ನಾಲ್ಕು 750 ಎಚ್.ಪಿ ಪಂಪ್ಸೆಟ್ಗಳನ್ನು ಅಳವಡಿಸಲಾಗುತ್ತದೆ. ಇಲ್ಲಿಂದ ಮೂರು ಕಿ.ಮೀ. ತನಕ ಪೈಪ್ನಲ್ಲಿ ರಭಸವಾಗಿ ನೀರು ಬಂದು ಮಾವಿನಕಟ್ಟೆಯಲ್ಲಿ 14 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತದೆ. ಅಲ್ಲಿ ಶೇಖರಿಸಿದ ನೀರು ಗುರುತ್ವದ ಮೂಲಕ ನೈಸರ್ಗಿಕ ತೋಡುಗಳಿಗೆ ಹರಿಯ ಬಿಡಲಾಗುತ್ತದೆ. ರಾಜಾಡಿ ಹೊಳೆ, ಉಪನದಿಗೆ ಹೋಗುತ್ತದೆ. ಅಲ್ಲಲ್ಲಿ 33 ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಲಾಗುತ್ತದೆ. ಈ ಮೇ ಅಂತ್ಯದ ಒಳಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಸಂಘ ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ ಶೆಟ್ಟಿ ಬಲಾಡಿ, ತ್ರಾಸಿ ವಲಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಹೆಬ್ರಿ ವಲಯದ ಅಧ್ಯಕ್ಷ ಚೋರಾಡಿ ಅಶೋಕ್ ಶೆಟ್ಟಿ, ಮಂದರ್ತಿ ವಲಯದ ಅಧ್ಯಕ್ಷ ಗುಲ್ವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುದೇಶ ಕುಮಾರ್ ಶೆಟ್ಟಿ, ಹಟ್ಟಿಯಂಗಡಿ ಗ್ರಾ.ಪಂ.ಅಧ್ಯಕ್ಷೆ ಅಮೃತಾ ಭಂಡಾರಿ, ಗುಡಿಬೆಟ್ಟು ಪ್ರದೀಪ್ ಕುಮಾರ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಲ್ಯಾಡಿ ಶಿವರಾಮ ಶೆಟ್ಟಿ, ಕಾವ್ರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿಜಯ ಪುತ್ರನ್, ಕಿರಣ್ ಹೆಗ್ಡೆ ಅಂಪಾರು ಮೊದಲಾದವರು ಉಪಸ್ಥಿತರಿದ್ದರು.
ವಾರಾಹಿ ನೀರಾವರಿ ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎನ್.ಜಿ ಭಟ್, ಕಿರಿಯ ಇಂಜಿನಿಯರ್ ಪ್ರಸನ್ನ ಉಪಸ್ಥಿತರಿದ್ದು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಕಾವ್ರಾಡಿ ವಲಯದ ಅಧ್ಯಕ್ಷ ಶರತ್ಚಂದ್ರ ಶೆಟ್ಟಿ ಸ್ವಾಗತಿಸಿದರು.