Kundapra.com ಕುಂದಾಪ್ರ ಡಾಟ್ ಕಾಂ

ಸಮುದ್ರದಲ್ಲಿ ಸಿ – ಆಂಬುಲೆನ್ಸ್ ಬೋಟ್ ಶೀಘ್ರ ನಿಯೋಜನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸಮುದ್ರದಲ್ಲಿ ಯಾವುದೇ ರೀತಿಯ ಅನಧಿಕೃತ ಹಾಗೂ ನಿಷೇಧಿತ ಮೀನುಗಾರಿಕಾ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರವಹಿಸಬೇಕು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್ ಆಚಾರ್ಯ ಸಂಭಾಂಗಣದಲ್ಲಿ, ಜಿಲ್ಲೆಯ ಪಶುಪಾಲನೆ ಮತ್ತು ಮೀನುಗಾರಿಕಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಂದರುಗಳಲ್ಲಿ ಮೀನುಗಾರರು ತಪ್ಪದೇ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಹಾಗೂ ಕೈಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

ಸಮುದ್ರದಲ್ಲಿ ಅಪಘಾತಕ್ಕೀಡಾದವರನ್ನು ರಕ್ಷಿಸಿ ಚಿಕಿತ್ಸೆ ನೀಡಲು ಅನುಕೂಲವಾಗಲು ಸಿ-ಆಂಬುಲೆನ್ಸ್ ಬೋಟ್ ಅನ್ನು ಶೀಘ್ರದಲ್ಲಿಯೇ ನಿಯೋಜಿಸಲಾಗುವುದು ಎಂದರು.

ಬಂದರುಗಳಲ್ಲಿ ಈಗಾಗಲೇ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ದಿನಪೂರ್ತಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಆಗಿಂದಾಗೆ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿದಿನ ಮಲ್ಪೆ ಬಂದರಿಗೆ 8 ರಿಂದ 10 ಸಾವಿರ ಜನ ಬಂದು ಹೋಗುತ್ತಿದ್ದಾರೆ. ಅವುಗಳಲ್ಲಿ ಸ್ಥಳೀಯರು, ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬಂದು ಹೋಗುವವರ ಸಂಖ್ಯೆಯು ಹೆಚ್ಚಿದ್ದು, ಮೀನುಗಾರಿಕಾ ಚಟುವಟಿಕೆಗಳಲ್ಲಿ ಭಾಗವಹಿಸುವವರು ನೋಂದಣಿ ಸೇರಿದಂತೆ ಮತ್ತಿತರ ನಿಯಂತ್ರಣಕ್ಕೆ ಯೋಜನೆಯನ್ನು ರೂಪಿಸಬೇಕು ಎಂದು ಕರಾವಳಿ ಕಾವಲು ಪಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ನೋಂದಣಿಯಾಗದಿರುವ ಪಾತಿ ದೋಣಿಗಳನ್ನು ಮುಂದಿನ ಮೂರು ತಿಂಗಳ ಒಳಗಾಗಿ ನೋಂದಣಿ ಕಾರ್ಯ ಮಾಡಿ ಮುಗಿಸಬೇಕು ಎಂದ ಅವರು, ಮೀನುಗಾರಿಕೆಗೆ ತೆರಳಿರುವ ವಿವಿಧ ರೀತಿಯ ಬೋಟ್ಗಳು ಸರ್ಕಾರದ ಸೂಚನೆಯನ್ವಯ ನಿಗಧಿಪಡಿಸಿರುವ ಕಲರ್ ಕೋಡಿಂಗ್ಗಳನ್ನು ತಪ್ಪದೇ ಪಾಲಿಸಬೇಕು ಎಂದರು.

ಹೊರ ಜಿಲ್ಲೆಗಳಿಂದ ಅನಧಿಕೃತವಾಗಿ ಮೀನುಗಾರಿಕೆ ಚಟುವಟಿಕೆ ನಡೆಸುತ್ತಿರುವುದೆಂದು ಹೇಳಿಕೊಂಡು ಬರುವ ದೋಣಿಗಳಿಗೆ ದಂಡ ವಿಧಿಸಬೇಕು. ದೋಣಿಗಳಿಗೆ ಚೀನಾ ನಿರ್ಮಿತ ಟ್ರೇಸಿಂಗ್ ಡಿವೈಸ್ಗಳನ್ನು ಅಳವಡಿಸಿದ್ದು, ಅವುಗಳು ಬಂದರು ಕಡೆ ಬರುವಾಗ ಅವುಗಳನ್ನು ಗುರುತಿಸಲು ಗೊಂದಲಗಳು ಉಂಟಾಗುತ್ತಿವೆ. ಅಂತಹ ಸಾಧನಗಳ ತಾಂತ್ರಿಕತೆಯನ್ನು ಸರಿಪಡಿಸಬೇಕು ಎಂದರು.

ಈಗಾಗಲೇ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದೆ ಎಂದ ಅವರು, ಪ್ರತಿ ಜಿಲ್ಲೆಯಲ್ಲೂ ಗೋ-ಶಾಲೆಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸುವುದರೊಂದಿಗೆ ಸುಸಜ್ಜಿತ ಗೋಶಾಲೆಗಳನ್ನು ಪ್ರಾರಂಭಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಕರಾವಳಿ ಕಾವಲು ಪೊಲೀಸ್ ಘಟಕದ ಪೊಲೀಸ್ ಅಧೀಕ್ಷಕ ಚೇತನ್ ಆರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version