ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಲೋಕಾಯುಕ್ತದಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ, ಬೈಂದೂರು ಬಾಡದ ರಾಘವೇಂದ್ರ ಎಮ್. ಹಾಗೂ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬೆಂಗಾವಲು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಕಾಡಿನತಾರು ಅವರು 2020ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದು, ಬೆಂಗಳೂರಿನ ಕೆ.ಎಸ್.ಆರ್.ಪಿ ಪೆರೇಡ್ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪದಕ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ಅಲೋಕ್ ಕುಮಾರ್ ಉಪಸ್ಥಿತರಿದ್ದರು.
ಪೊಲೀಸ್ ಪೇದೆಯಾಗಿರುವ ಶಂಕರ ಪೂಜಾರಿ ಅವರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ್ದು, ಓಟ, ರಿಲೇ ಮೊದಲಾದ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ತನಕವೂ ಭಾಗವಹಿಸಿದ್ದಾರೆ. 2014ರಲ್ಲಿ ನಡೆದ 26ನೇ ಮಲೇಷಿಯಾ ಅಥ್ಲೆಟಿಕ್ ಚಾಂಪಿಯನ್’ಶಿಪ್’ನಲ್ಲಿ 2 ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಗೆದ್ದಿದ್ದರು.ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಾಸ್ಟ್ ಸ್ಪೋರ್ಟ್ಸ್ 2021 ಕ್ರೀಡಾಕೂಟ 100 ಹಾಗೂ 200 ಮೀಟರ್ ಓಟದ ಸ್ವರ್ಧೆಯಲ್ಲಿ ಅವರು ಬೆಳ್ಳಿಯ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು.